ಸುದ್ದಿ360 ಬೆಳಗಾವಿ ಜೂ.23: ತ್ರೇತಾಯುಗದಲ್ಲಿ ಹನುಮ ತನ್ನ ಎದೆ ಬಗೆದು ರಾಮನನ್ನು ತೋರಿಸಿದ್ದ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭಕ್ತನ ಕಂಠದಲ್ಲಿ ಶ್ರೀಕೃಷ್ಣ ಕಂಡಿದ್ದಾನೆ. ಆತನ ಕಂಠದಿಂದ ಕೃಷ್ಣನನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಆಶ್ಚರ್ಯವಾಗುತ್ತಿದೆಯಾ. . . 48 ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದಾನೆ. ಇದರಿಂದ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ ಸಂಪರ್ಕಿಸಲಾಗಿದೆ. ವೈದ್ಯರ ಸಲಹೆಯಂತೆ ಎಕ್ಸರೇ ಮಾಡಿಸಲಾಗಿದೆ. ಎಕ್ಸರೇ ರಿಪೋರ್ಟ್ ನಲ್ಲಿ ಲೋಹದ ಕೃಷ್ಣ ಪ್ರತ್ಯಕ್ಷನಾಗಿದ್ದಾನೆ. ಗಂಟಲಿನಲ್ಲಿ ಸಿಲುಕಿಕೊಂಡಿರುವ ಕೃಷ್ಣನನ್ನು ಹೊರ ತೆಗೆಸಲು ಹೆಚ್ಚಿನ ಚಿಕತ್ಸೆಗಾಗಿ ಬೆಳಗಾವಿಯ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿದೆ ಎಂಬುವದನ್ನು ಎಂಡೋಸ್ಕೋಪ್ ಮುಖಾಂತರ ದೃಢಪಡಿಸಿಕೊಂಡ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ವೈದ್ಯರಿಗೆ ಸವಾಲಾಗಿದ್ದ ಈ ಶ್ತ್ರಚಿಕಿತ್ಸೆಗೆ ಇಎನ್ ಟಿ ವಿಭಾದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ, ಅರವಳಿಕೆ(Anaesthetist) ವೈದ್ಯ ಡಾ. ಚೈತನ್ಯ ಕಾಮತ್ ಸೇರಿದಂತೆ ಇತರ ಶುಶ್ರೂಷೆಯರು ಶ್ರಮಿಸಿದ್ದಾರೆ. ಕೊನೆಗೂ ಗಂಟಲಿನಲ್ಲಿ ಬಾಧಿಸುತ್ತಿದ್ದ ಕೃಷ್ಣನ ವಿಗ್ರಹವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದು ವೈದ್ಯರು ಯಶಸ್ವಿಯಾಗಿದ್ದಾರೆ. ಇದೀಗ ತೀರ್ಥದ ಮೂಲಕ ಕೃಷ್ಣನನ್ನು ಸೇವಿಸಿದ ವ್ಯಕ್ತಿ ನಿರಾಳನಾಗಿದ್ದು, ಭಕ್ತರು ತೀರ್ಥ ಸೇವಿಸುವಾಗ ಎಚ್ಚರದಿಂದಿರಿ ಎಂಬ ಸಂದೇಶ ನೀಡಿದಂತಾಗಿದೆ!!