ಸುದ್ದಿ360 ಶಿವಮೊಗ್ಗ ಜೂ.23: ನಗರದಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ದಕ್ಷಿಣ ರಾಜ್ಯಗಳ ಪೆಂಕಾಕ್ ಸಿಲಾತ್ (ಸಮರ ಕಲೆ)ಯ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಇಲ್ಲಿನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜೂನ್ 25 ಮತ್ತು 26 ರಂದು ನಡೆಯಲಿದೆ ಎಂದು ರಾಜ್ಯ ಪೆಂಕಾಕ್ ಸಿಲಾತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್ ಜಿ. ಭಟ್ಟ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಹೊಂದಿರುವ ಈ ಕಲೆಯು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿದೆ. ಶಿವಮೊಗ್ಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಬಾಲಕ, ಬಾಲಕಿಯರ, ಪುರುಷ, ಮಹಿಳಾ ಮತ್ತು ಪೊಲೀಸ್ ಟೀಮ್ಗಳು ಭಾಗವಹಿಸಲಿವೆ. ಟೀನ್ ವಿಭಾಗ, ಸಬ್ ಜ್ಯೂನಿಯರ್, ಜೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್ ವಿಭಾಗದಲ್ಲಿ ಪಂದ್ಯಾವಳಿಯು ಟ್ಯಾಂಡಿಂಗ್, ತುಂಗಲ್, ರೇಗೂ ಹಾಗೂ ಗಂಡಾ ಎಂಬ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿರುವುದಾಗಿ ತಿಳಿಸಿದರು.
ಸ್ಪರ್ಧೆಯಲ್ಲಿ 8ರಿಂದ 60 ವರ್ಷದೊಳಗಿನವರು ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಸುಮಾರು 500 ಕ್ರೀಡಾಪಟುಗಳು ದಕ್ಷಿಣ ರಾಜ್ಯಗಳಿಂದ ಆಗಮಿಸಲಿದ್ದಾರೆ. 100 ತೀರ್ಪುಗಾರರು, ಕ್ರೀಡಾಧಿಕಾರಿಗಳು, ತರಬೇತುದಾರರು ಕ್ರೀಡಾಕೂಟದಲ್ಲಿ ಭಾಗವಹಿಸುವರು ಎಂದರು.
ಪಂದ್ಯಾವಳಿಯನ್ನು ಶಾಸಕ ಕೆ. ಎಸ್. ಈಶ್ವ್ವರಪ್ಪ 25 ರ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸುವರು. ಅತಿಥಿಗಳಾಗಿ ಎಂಎಲ್ಸಿ ಡಿ. ಎಸ್. ಅರುಣ್, ಎಸ್ ದತ್ತಾತ್ರಿ, ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆಗಮಿಸುವರು. ಸಿಲತ್ ಸಂಸ್ಥೆಯ ರಾಜ್ಯಾಧ್ಯಕ್ಷ ಜಗನ್ನಾಥ ಆಲಂಪಲ್ಲಿ ಅಧ್ಯಕ್ಷತೆ ವಹಿಸುವರು ಎಂದರು.
ಸಮಾರೋಪವು 26 ರ ಸಂಜೆ 6:30 ಕ್ಕೆ ನಡೆಯಲಿದೆ. ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್, ಹೆಚ್ಚುವರಿ ಎಸ್ ಪಿ ವಿಕ್ರಂ ಅಮಟೆ, ಮಾಜಿ ಮೇಯರ್ ನಾಗರಾಜ ಕಂಕಾರಿ, ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕಕ ಡಾ|| ಎಸ್. ಶ್ರೀಧರ್ ಹಾಜರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಹಂಚಿನಾಳ, ಜಿಲ್ಲಾ ಸಮಿತಿಯ ಕುಮಾರ್ ವಿ ನಾಯ್ಡು ಹಾಜರಿದ್ದರು.