ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸರಕಾರ ಉರುಳುವುದು ನಿಶ್ಚಿತ
ಸುದ್ದಿ 360 ಮುಂಬೈ, ಜೂ.24: ಕಳೆದ ಎರಡು ದಿನಗಳಿಂದ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಿರುವ ಮಹಾರಾಷ್ಟ್ರದಲ್ಲಿ ಬಂಡಾಯದ ಬಾವುಟ ಹಾರಿಸುವ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನಿರೀಕ್ಷೆಯಂತೆ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪರಿಣಾಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿ ಸರಕಾರ ಪತನವಾಗುವುದು ಖಚಿತ ಎನ್ನಲಾಗಿದೆ.
ಈಗಾಗಲೇ ತಮ್ಮ ತೆಕ್ಕೆಯಲ್ಲಿ 42 ಬಂಡಾಯ ಶಾಸಕರನ್ನು ಹಿಡಿದಿಟ್ಟುಕೊಂಡಿರುವ ಏಕನಾಥ್ ಶಿಂಧೆ ಬಣ ನಂಬರ್ ಗೇಮ್ನಲ್ಲಿ ಮುಂದಿದೆ. ಪ್ರಸ್ತುತ ಉದ್ಧವ್ ಠಾಕ್ರೆ ಬಣದಲ್ಲಿ ಶಿವಸೇನೆಯ ಕೇವಲ 13 ಶಾಸಕರು ಉಳಿದಿದ್ದಾರೆ. ಈ ನಡುವೆ ಹಿಂದೆ ಬಣ್ಣದಲ್ಲಿರುವ ಬಂಡಾಯ ಶಾಸಕರು ಮನವೊಲಿಸುವ ಉದ್ಧವ್ ಕಸರತ್ತು ವಿಫಲಗೊಂಡಿದೆ.
ಶಿವಸೇನೆಯಂತಹ ಶಿಸ್ತಿನ ಪಕ್ಷದಲ್ಲೇ ಉದ್ಭವಿಸಿರುವ ಆಂತರಿಕ ಬೇಗುದಿ ಕಂಡು ಅಚ್ಚರಿಗೊಂಡಿರುವ ಕಾಂಗ್ರೆಸ್, ಸಿಎಂ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸಬೇಕೇ, ಅಥವಾ ಬೆಂಬಲಿಸದೆ ಕಾದು ನೋಡುವ ತಂತ್ರ ಅನುಸರಿಸಬೇಕೇ ಎಂಬ ಕುರಿತು ಗೊಂದಲದಲ್ಲಿದೆ. ಇತ್ತು ಶರತ್ ಪವಾರ್ ನೇತೃತ್ವದ ಎನ್ಸಿಪಿ ಉದ್ಧವ್ ಬಣಕ್ಕೆ ಬೆಂಬಲ ನೀಡಿದ್ದು ಮಾತುಕತೆಗೆ ಮುಂದಾಗುವಂತೆ ಸಲಹೆ ನೀಡಿದೆ.
ಈ ಎರಡು ದಿನಗಳ ರಾಜಕೀಯ ಬದಲಾವಣೆಗಳ ಕುರಿತು ಪ್ರತಿಕ್ರಿಯಿಸಿರುವ ಬಂಡಾಯದ ನಾಯಕ ಏಕನಾಥ್ ಶಿಂಧೆ, “ದೇಶದ ದೊಡ್ಡ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿ ನನ್ನ ನಿರ್ಧಾರವನ್ನು “ಐತಿಹಾಸಿಕ” ಎಂದು ಬಣ್ಣಿಸಿದೆ. ಹಾಗೆ ಅಗತ್ಯವಿದ್ದಾಗ ನೆರವಿಗೆ ಬರುವುದಾಗಿ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ. ಇದು ನಮಗೆ ಹೆಚ್ಚಿನ ಬಲ, ವಿಶ್ವಾಸ ತುಂಬಿದೆ’ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ 42ಮಂದಿ ಬಂಡಾಯ ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಯ ರ್ಯಾಡಿಸನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಏಕನಾಥ ಶಿಂಧೆ, “ಮೊದಲು ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆಗಿನ ಮೈತ್ರಿ ಇಂದ ಹೊರಬರುವಂತೆ ಉದ್ಧವ್ ಠಾಕ್ರೆಗೆ ತಿಳಿಸಿದ್ದಾರೆ.
ಈ ನಡುವೆ ಬಂಡಾಯ ಬಣಕ್ಕೆ ಸಂದೇಶ ರವಾನಿಸಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, ‘ಮಹಾ ವಿಕಾಸ ಅಘಾಡಿ ತೊರೆಯಲು ಶಿವಸೇನೆ ಸಿದ್ಧವಿದೆ 24 ಗಂಟೆಯೊಳಗೆ ಬನ್ನಿ ಎಂದು’ ಹೇಳಿದ್ದಾರೆ. ಹೀಗಾಗಿ ಕ್ಲೈಮ್ಯಾಕ್ಸ್ ಇನ್ನೂ ಬಾಕಿ ಇದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.