ಸುದ್ದಿ 360 ಬೆಳಗಾವಿ ಜೂ. 24: ಜಿಲ್ಲೆಯ ಮೂಡಲಗಿ ಪಟ್ಟಣ ಮಧ್ಯೆ ಹರಿಯುವ ಹಳ್ಳವೊಂದರಲ್ಲಿ ಹತ್ಯೆಗೊಳಗಾದ ಏಳು ಭ್ರೂಣಗಳು ಚಾಕೊಲೇಟ್ ಡಬ್ಬಿಯಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಶುಕ್ರವಾರ ಬೆಳಗ್ಗೆ ಹಳ್ಳಕ್ಕೆ ಬಟ್ಟೆ ತೊಳೆಯಲು ಬಂದ ಜನ ಈ ಭ್ರೂಣ ತುಂಬಿದ ಬಾಟಲ್‍ಗಳು ದಂಡೆಯಲ್ಲಿ ಬಿದ್ದಿರುವದನ್ನು ಕಂಡು ಹೌಹಾರಿದ್ದಾರೆ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭ್ರೂಣ ಲಿಂಗ ಹತ್ಯೆ ಕುರಿತಾಗಿ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಏಕ ಕಾಲಕ್ಕೆ ಏಳು ಭ್ರೂಣಗಳು ಹೀಗೆ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.
ಭ್ರೂಣ ಹತ್ಯೆ ಶಂಕೆ – ತನಿಖಾ ತಂಡ ರಚನೆ:
ಘಟನೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಪತ್ತೆಯಾಗಿರುವ ಭ್ರೂಣಗಳು ಗರ್ಭಪಾತ ಮಾಡಿ ತೆಗೆದವು. ಐದು ತಿಂಗಳು ತುಂಬಿದ ಭ್ರೂಣಗಳಿಂದ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದ ಶಂಕೆ ಕಂಡು ಬರುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ತಕ್ಷಣ ಅಧಿಕಾರಿಗಳ ತಂಡ ರಚಿಸಿ ತನಿಖೆ ಕೂಗೊಳ್ಳಲಾಗುವುದು. ಪತ್ತೆಯಾದ ಭ್ರೂಣಗಳನ್ನು ಮೂಡಲಗಿ ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾಗುವುದು. ನಂತರ ಜಿಲ್ಲಾ ವಿಧಿವಿಜ್ಞಾನ ಕೇಂದ್ರಕ್ಕೆ ತಂದು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ ಅವರು, ಈ ಕುರಿತು ಪೊಲೀಸ್ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಹೇಳಿದರು.