ಸಾಲ ಮರುಪಾವತಿಯಲ್ಲಿ ರೈತರೇ ಮಾದರಿ – ಡಿಸಿಸಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಇಲ್ಲ

ದಾವಣಗೆರೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ

ಸುದ್ದಿ360 ದಾವಣಗೆರೆ, ಜೂನ್ 28: ರಾಜ್ಯ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕುಗಳಿಂದ ಸಾಲ ಪಡೆದ ಒಟ್ಟು ರೈತರಲ್ಲಿ ಶೇ.97 ಮಂದಿ ಸಕಾಲಕ್ಕೆ ಮರು ಪಾವತಿ ಮಾಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಶೂನ್ಯ ಬಡ್ಡಿ ಸಾಲ ಮೊತ್ತ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೊಮಶೇಖರ್ ಹೇಳಿದರು.

ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೇಂದ್ರ ಬ್ಯಾಂಕ್‍ ಕಚೇರಿ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ರೈತರಿಗೆ ನೀಡುತ್ತಿರುವ ಶೂನ್ಯ ಬಡ್ಡಿ ದರದ ಸಾಲ ಮೊತ್ತವನ್ನು ಶೀಘ್ರವೇ ದ್ವಿಗುಣಗೊಳಿಸಲಾಗುವುದು. ಪ್ರಸ್ತುತ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಮತ್ತು 10 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಮೊತ್ತ ಹೆಚ್ಚಿಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ನಬಾರ್ಡ್ ಜತೆ ಮಾತುಕತೆ ನಡೆಸಿದ್ದು, ಇದಕ್ಕೆ ನಬಾರ್ಡ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಾಲ ಮೊತ್ತವನ್ನು ದ್ವಿಗುಣಗೊಳಿಸುವ ನಿರ್ಧಾರವನ್ನು ಸರಕಾರ ಶೀಘ್ರವೇ ಪ್ರಕಟಿಸಲಿದೆ ಎಂದು ತಿಳಿಸಿದರು.

ನಾನು ಸಹಕಾರ ಸಚಿವ ಹುದ್ದೆ ವಹಿಸಿಕೊಂಡ ಆರಂಭದಲ್ಲಿ ಮೈಸೂರು, ಮಂಡ್ಯ, ಕೋಲಾರ, ಶಿವಮೊಗ್ಗ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆದೇಶದಂತೆ ಈ ನಾಲ್ಕು ಡಿಸಿಸಿ ಬ್ಯಾಂಕ್‍ಗಳ ಪರಿಶೀಲನೆ ನಡೆಸಲಾಯಿತು. ಆಗ ಶಿವಮೊಗ್ಗ ಬ್ಯಾಂಕ್ ಆಡಳಿತ ಅಧೋಗತಿಗೆ ತಲುಪಿದ್ದು ಬಯಲಾಯಿತು. ಬಳಿಕ ಆ ಬ್ಯಾಂಕ್‌ನ ಆಡಳಿತ ಮಂಡಳಿ ಬದಲಿಸಿ ಕ್ರಮ ಕೈಗೊಳ್ಳಲಾಯಿತು. ಈಗ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಅದೇ ರೀತಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಲಕಾಲಕ್ಕೆ ರಾಜ್ಯದ ಎಲ್ಲಾ 21 ಡಿಸಿಸಿ ಬ್ಯಾಂಕುಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸರಕಾರ ಹಾಗೂ ಆಡಳಿತ ಮಂಡಳಿ ವಿರೋಧದ ನಡುವೆಯೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಈ ಹಿಂದೆ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂ. ಸಾಲ ನೀಡಿದ್ದರು. ಆ ಪೈಕಿ ಒಂದು ಪೈಸೆ ಕೂಡ ಮರುಪಾವತಿ ಆಗಿಲ್ಲ. ಸಾಮಾನ್ಯ ರೈತರು 2-3 ಲಕ್ಷ ಸಾಲ ಬಾಕಿ ಉಳಿಸಿಕೊಂಡರೆ ಮನೆ ಬಾಗಿಲಿಗೆ ಹೋಗಿ ಡಂಗೂರ ಸಾರಿಸುತ್ತಾರೆ. ಆದರೆ, ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡವರ ವಿರುದ್ಧ ಸಣ್ಣ ಕ್ರಮವೂ ಆಗುವುದಿಲ್ಲ. ಅವರೆಲ್ಲಾ ಪ್ರಭಾವಿಗಳು, ರಾಜಕೀಯ ಒತ್ತಡ ತರುತ್ತಾರೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಆದ್ದರಿಂದ ಡಿಸಿಸಿ ಬ್ಯಾಂಕುಗಳ ಮೂಲಕ ಇನ್ನುಮುಂದೆ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡದೆ ಇರಲು ನಿರ್ಧರಿಸಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿ ಸ್ವಾಮಿ, ಜಿಲ್ಲಾಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ ರೆಡ್ಡಿ, ಮೇಯರ್ ಜಯಮ್ಮ ಗೋಪಿನಾಯ್ಕ, ದೂಡ ಅಧ್ಯಕ್ಷ ಕೆ.ಎಂ. ಸುರೇಶ್, ಡಿಸಿಸಿ ಉಪಾಧ್ಯಕ್ಷ ಬಿ. ಶೇಖರಪ್ಪ, ನಿರ್ದೇಶಕರಾದ ಜಗದೀಶಪ್ಪ ಬಣಕಾರ್, ಬಿ.ವಿ. ಚಂದ್ರಶೇಖರ್, ಡಾ.ಜೆ.ಆರ್. ಷಣ್ಮುಖಪ್ಪ, ಕೆ.ಎಚ್. ಷಣ್ಮುಖಪ್ಪ, ಜಿ.ಎನ್. ಸ್ವಾಮಿ, ಬಿ. ಹಾಲೇಶಪ್ಪ, ಆರ್.ಜಿ. ಶ್ರೀನಿವಾಸಮೂರ್ತಿ, ನಾಮ ನಿರ್ದೇಶಿತ ನಿರ್ದೇಶಕ ಟಿ.ಜಿ. ಜೀವನಪ್ರಕಾಶ್, ಸಿರಿಗೆರೆ ರಾಜಣ್ಣ, ಜಿ. ಮುರಿಗೇಂದ್ರಪ್ಪ, ಎಚ್. ದಿವಾಕರ್, ಸಿಇಒ ತಾವರ್ಯಾನಾಯ್ಕ, ಎಚ್. ಅನ್ನಪೂರ್ಣ, ಎಚ್.ಕೆ. ಪಾಲಾಕ್ಷಪ್ಪ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!