ಹೆತ್ತವರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಪೊಲೀಸರ ಅತಿಥಿಯಾದ ಮಗ ಮಹರಾಯ !

ಸುದ್ದಿ360 ಉಡುಪಿ, ಜೂನ್ 28: ತನ್ನ ಮೊಬೈಲ್‌ನಿಂದ ಕರೆ ಮಾಡಿ ಆತಂಕದಿಂದ ಮಾತನಾಡಿದ್ದಮಗ ಮಹಾರಾಯ! ನನ್ನನ್ನು ಅಪಹರಣ ಮಾಡಿರುವುದಾಗಿ ಹೇಳಿ 5 ಲಕ್ಷ ರೂ. ಬೇಡಿಕೆ ಇಟ್ಟು ಹೆತ್ತವರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇದೇನು ಕಾಲ ಬಂತಪ್ಪ. . . ಅಂತೀರಾ, ಏನ್‍ ಮಾಡೋದು ಸ್ವಾಮಿ ಮಕ್ಕಳು ದುಶ್ಚಟಗಳ ದಾಸರಾದರೆ ಎಂತಹ ಕೃತ್ಯಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಇಂತಹ ಕೆಲವು ಘಟನೆಗಳು ಉದಾಹರಣೆಯಾಗಿಬಿಡುತ್ತವೆ.

ಮೋಜು ಮಸ್ತಿಯ ಬಲಿಗೆ ಬಿದ್ದ 25ರ ಹರೆಯದ ವರುಣ್‍ನಾಯಕ್‍ ಈ ಘಟನೆಯ ಮುಖ್ಯ ಪಾತ್ರಧಾರಿ.

ಏನಿದು ಘಟನೆ ಅಂತೀರ. . .

ಉಡುಪಿ ನಿವಾಸಿಗಳಾದ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಸರಕಾರಿ ಶಾಲೆ ಶಿಕ್ಷಕಿ ದಂಪತಿ ಜೂ.26ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಉಡುಪಿ ನಗರ ಠಾಣೆಗೆ ಬಂದು ನನ್ನ ಪುತ್ರ ವರುಣ್ ನನ್ನು ಯಾರೋ ಅಪಹರಣ ಮಾಡಿ 5 ಲಕ್ಷ ರೂ. ಬೇಡಿಕೆ ಇಟ್ಟಿರುವ ಬಗ್ಗೆ ದೂರು ನೀಡುತ್ತಾರೆ. ಹೀಗೆ ದಾಖಲದ ಪ್ರಕರಣವನ್ನು ಬೇಧಿಸಲು ನಗರ ಠಾಣೆಯ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರುವಿಶೇಷ ತಂಡ ರಚಿಸಿ ವರುಣ್ ನಾಯಕ್ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.

ಎಸ್ಪಿ ಕೊಟ್ಟಿರುವ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇರೆಗೆ ಗೋವಾಕ್ಕೆ ಠಾಣಾ ಸಿಬ್ಬಂದಿ ರಾಜೇಶ್ ಮತ್ತು ಮಾಲ್ತೇಶ್ ಅವರನ್ನು ಕಳುಹಿಸಲಾಗಿತ್ತು. ಪಣಜಿ ಪೊಲೀಸರ ಸಹಾಯದೊಂದಿಗೆ ಟವರ್ ಲೊಕೇಶನ್ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಅಪಹರಣಕ್ಕೆ ಒಳಗಾಗಿದ್ದ ವ್ಯಕ್ತಿ ಕ್ಯಾಸಿನೋದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವುದು ಕಂಡು ಪೊಲೀಸರೇ ದಂಗಾಗಿದ್ದರು.

ವರುಣ್‌ನನ್ನು ಗೋವಾದಲ್ಲಿ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದ್ದಾರೆ. ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದೇನೆ. ತನಗೆ ಯಾವುದೇ ಸರಿಯಾದ ಕೆಲಸಗಳು ಇಲ್ಲ ಎಂದು  ಬಾಯಿ ಬಿಟ್ಟಿದ್ದಾನೆ. ಹೀಗೆ ಪೊಲೀಸರು ಅವನನ್ನು ವಿಚಾರಿಸಿದಾಗ  ತನ್ನ ಮೋಜು, ಮಸ್ತಿ ಮತ್ತು ತನ್ನ ಚಟಗಳಿಗೆ ಹಣ ಇಲ್ಲದ ಕಾರಣ ತಂದೆ-ತಾಯಿಯ ಬಳಿ ಇರುವ ಹಣವನ್ನು ತನ್ನ ಮೋಜು ಮಸ್ತಿಗಾಗಿ ಲಪಟಾಯಿಸುವ ಉದ್ದೇಶದಿಂದ ಅಪಹರಣದ ನಾಟಕ ಮಾಡಿರುವುದು ತಿಳಿದುಬಂದಿದೆ. ಅಲ್ಲದೇ ತನ್ನ ಮೊಬೈಲ್‌ನಿಂದ ತಾಯಿಯ ಮೊಬೈಲ್‌ಗೆ ಕರೆ ಮತ್ತು ಮಸೇಜ್ ಮಾಡಿ 5 ಲಕ್ಷ ಕೊಡದೇ ಇದ್ದಲ್ಲಿ ನನ್ನನ್ನು ಇಲ್ಲೇ ಕೊಲೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಅಳುತ್ತಾ ಪೋಷಕರಲ್ಲಿ ಆತಂಕದಲ್ಲಿ ಹೇಳಿಕೊಂಡಿದ್ದುದನ್ನು ವಿವರಿಸಿದ್ದಾನೆ.

ಪೊಲೀಸರ ಸಮಯವನ್ನು ವ್ಯರ್ಥಗೊಳಿಸಿದ್ದಲ್ಲದೇ ಸಂದಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ತಂದೆ-ತಾಯಿಯಿಂದ ಹಣ ಲಪಟಾಯಿಸುವ ಸಲುವಾಗಿ ಅಪಹರಣದ ನಾಟಕ ಮಾಡಿದ ವರುಣ್ ನಾಯಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ವರುಣ್‍ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಈಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತ್ತ ಪೋಷಕರಿಗೆ  ಮಗನ ಈ ಕೃತ್ಯ ಬೆಚ್ಚಿಬೀಳಿಸಿದೆ.

admin

admin

Leave a Reply

Your email address will not be published. Required fields are marked *

error: Content is protected !!