ಸುದ್ದಿ360 ದಾವಣಗೆರೆ.ಜು.01: ಗೋಬಿ ಮಂಚೂರಿ, ರೈಸ್ ಬಾತ್, ಗರಿ ಗರಿ ಪಕೋಡ, ಬಿಸಿ ಬಿಸಿ ಚಪಾತಿ, ರಸಗುಲ್ಲ. . . ಹೋ ಬಾಯಲ್ಲಿ ನೀರೂರುತ್ತಿದೆಯಾ. . ? ಶುಕ್ರವಾರ ಬೆಳಗ್ಗೆ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಇಂಥದ್ದೇ ಇನ್ನೂ ತರಹೇವಾರಿ ಖಾದ್ಯಗಳು ರುಚಿ ರುಚಿಯಾಗಿ ಸವಿಯಲು ಸಿದ್ಧವಿದ್ದವು.
ಹಾಗಂತ ಇದು ಯಾವುದೋ ಸಮಾರಂಭದ ಅಡುಗೆಯಾಗಿರದೆ, ನಗರದ ಸಿದ್ದವೀರಪ್ಪ ಬಡಾವಣೆಯ ಭದ್ರಾ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಗಳು ತಾವು ಸ್ವತಃ ಸೌಟು ಹಿಡಿದು ಸಿದ್ಧಪಡಿಸಿದ ಖಾದ್ಯಗಳಾಗಿದ್ದವು.
ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಭದ್ರಾಸ್ ಫುಡ್ ಫೆಸ್ಟಿವಲ್ ಇದಾಗಿತ್ತು. ಕಾಲೇಜಿನ ಬೋಧಕ, ಬೋಧಕೇತರ ವರ್ಗ, ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಮೇಳದಲ್ಲಿ ಘಮಘಮಿಸುತ್ತಿದ್ದ ತರಹೇವಾರಿ ಖಾದ್ಯಗಳ ರುಚಿ ಸವಿದರು.
ಬಿಐಇಟಿ ಪ್ರಿನ್ಸಿಪಾಲ್ ಎಚ್.ಬಿ. ಅರವಿಂದ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಭದ್ರಾ ಕಾಲೇಜು ಪ್ರಾಂಶುಪಾಲ ಪ್ರೊ.ಟಿ. ಮುರುಗೇಶ್ ವಹಿಸಿದ್ದರು. ಸಾಯಿ ಇಂಟರ್‌ನ್ಯಾಷನಲ್ ಎಂಡಿ ಅಶೋಕ್ ಪಿ. ಜನ್ನು , ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ, ಭದ್ರಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ. ಚಂದ್ರಪ್ಪ, ಭದ್ರಾ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಎಂ. ಸಂಕೇತ್, ಉಪಸ್ಥಿತರಿದ್ದರು.