ಸುದ್ದಿ360 ದಾವಣಗೆರೆ.ಜು.02: ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಮೆಡಿಕಲ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ಬಸ್ ಪಾಸಿನ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ನಗರದ KSRTC ಬಸ್ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓನ ಜಿಲ್ಲಾಕಾರ್ಯದರ್ಶಿ ಪೂಜಾನಂದಿಹಳ್ಳಿ ಮಾತನಾಡಿ, ರಾಜ್ಯದ ಎರಡನೇ ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ ಅವರ ತರಗತಿಗಳು ನವೆಂಬರ್ ನಲ್ಲಿ ಆರಂಭವಾಗಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್ ಪಾಸಿಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ. ಇದು ಇಷ್ಟು ವರ್ಷಗಳವರೆಗೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಅಂದರೆ, ನವೆಂಬರ್ ನಲ್ಲಿ ತರಗತಿ ಆರಂಭದ ನಂತರ ಪಾಸ್ ಪಡೆದ ವಿದ್ಯಾರ್ಥಿಗಳು ಆಗಸ್ಟ್ ನವರೆಗೂ, ಡಿಸೆಂಬರ್ ನಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸೆಪ್ಟಂಬರ್ ವರೆಗೂ ಉಚಿತವಾಗಿ ಓಡಾಡಬಹುದು. ಆದರೆ, ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಏಕಾಏಕಿ ಜೂನ್ ತಿಂಗಳಿಗೆ ವಿದ್ಯಾರ್ಥಿ ಬಸ್ ಪಾಸಿನ ಅವಧಿಯು ಕೊನೆಗೊಳ್ಳಲಿರುವುದರಿಂದ ಮುಂದಿನ ತಿಂಗಳಿನಿಂದ ದುಡ್ಡು ಕೊಟ್ಟು ಓಡಾಡಬೇಕು ಎಂದು ಹೇಳಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ತಿಳಿಸಿದರು.
ಹಲವು ವರ್ಷಗಳ ಹೋರಾಟದ ಫಲವಾಗಿ ವಿದ್ಯಾರ್ಥಿಗಳು ರಿಯಾಯಿತಿ ಪಾಸ್ ಅನ್ನು ಪಡೆದುಕೊಂಡಿದ್ದೇವೆ. ವಾಸ್ತವವಾಗಿ, ನಮ್ಮ ಹೋರಾಟ ಉಚಿತ ಪಾಸ್ ನೀಡಬೇಕು ಎಂಬುದೇ ಆಗಿದೆ. ಹೀಗಿರುವಾಗ, ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ, ಮಾನ್ಯತೆ ರದ್ದಾಗಿದೆ ದುಡ್ಡು ಕೊಟ್ಟು ಓಡಾಡಬೇಕು ಎನ್ನುವುದು, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಮೇಲೆ ಮತ್ತಷ್ಟು ಹೊರೆ ಹೊರಿಸಿದಂತಾಗಿದೆ ಎಂದರು.
ಈಗಾಗಲೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ.) ಯು ಹೆಚ್ಚುವರಿ ಶುಲ್ಕ ಪಡೆಯದೇ ವಿದ್ಯಾರ್ಥಿ ಬಸ್ ಪಾಸಿನ ಅವಧಿಯನ್ನು ಆಗಸ್ಟ್ ನವರೆಗೆ ವಿಸ್ತರಣೆ ಮಾಡಿದೆ. ಇದನ್ನೇ ಇತರೆ ಜಿಲ್ಲಾ ಸಾರಿಗೆ ಸಂಸ್ಥೆಗಳು ಅನುಸರಿಸಬೇಕು ಮತ್ತು ರಾಜ್ಯ ಸಾರಿಗೆ ಸಂಸ್ಥೆ ಸಹ, ವಿದ್ಯಾರ್ಥಿಗಳು ಪ್ರಯಾಣ ಮಾಡಲು ಅನುಕೂಲವಾಗುವಂತೆ ಪಾಸಿನ ಅವಧಿ ವಿಸ್ತರಣೆ ಮಾಡಬೇಕು ಎಂದು AIDSO ಹಾಗೂ ರಾಜ್ಯದ ವಿದ್ಯಾರ್ಥಿಗಳು ಮನವಿ ಮಾಡುವುದಾಗಿ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಛೇರಿ ಕಾರ್ಯದರ್ಶಿ ಕಾವ್ಯ ಬಿ., ಜಿಲ್ಲಾ ಸೆಕ್ರೆಟ್ರಿಯೆಟ್ ಸದಸ್ಯಅಭಿಷೇಕ್ ಮತ್ತು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.