ಬಿಜೆಪಿಯಲ್ಲಿ ಮಾತ್ರ ಮಹಿಳೆಗೆ ಸೂಕ್ತ ಸ್ಥಾನಮಾನ : ವೀರೇಶ ಹನಗವಾಡಿ ಅಭಿಮತ

ಸುದ್ದಿ360 ದಾವಣಗೆರೆ, ಜು.02:  ಇತರೆ ರಾಜಕೀಯ ಪಕ್ಷಗಳು ಮಹಿಳೆಯರನ್ನು ಮತ ಬ್ಯಾಂಕ್‌ಗಾಗಿ ಮಾತ್ರವೇ ಉಪಯೋಗಿಸಿಕೊಳ್ಳುತ್ತವೆ. ಬಿಜೆಪಿಯಲ್ಲಿ ಮಾತ್ರವೇ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ತಿಳಿಸಿದರು.

ನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿರುವ 2 ದಿನಗಳ ಪ್ರಶಿಕ್ಷಣ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು ಒಂದು ಕುಟುಂಬದ ಮೇಲೆ ನಿಂತಿದೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನೆಹರೂ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರಿಗೂ ಅವಕಾಶವಿಲ್ಲ. ಜೆಡಿಎಸ್ ಪಕ್ಷ ಕೂಡ ಕುಟುಂಬವೊಂದಕ್ಕೆ ಸೀಮಿತವಾಗಿದ್ದು, ಎಲ್ಲಾ ಪ್ರಮುಖ ಸ್ಥಾನಗಳೂ ಕುಟುಂಬದಲ್ಲೇ ಹಂಚಿಕೆಯಾಗುತ್ತವೆ. ಆದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ರಾಷ್ಟ್ರಾಧ್ಯಕ್ಷ, ಪ್ರಧಾನಿಯಾಗುವ ಅವಕಾಶವಿದೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ 11 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಪಕ್ಷ ಸಂಘಟನೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರು ರಾಜಕೀಯದಲ್ಲೂ ಉನ್ನತ ಸ್ಥಾನಕ್ಕೆ ಬರಬೇಕು. ಈ ದಿಸೆಯಲ್ಲಿ ಜನಸಂಖ್ಯೆಯ ಶೇ.50ರಷ್ಟಿರುವ ಮಹಿಳೆಯರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಎರಡೂ ಸ್ಥಾನವನ್ನು ಮಹಿಳೆಯರಿಗೆ ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಮಹಿಳೆಯರು ಕಾರ್ಯ ನಿರ್ವಹಿಸಿದ್ದಾರೆ. ಬೇರೆ ಪಕ್ಷಗಳು ಮಹಿಳೆಯರನ್ನು ಮತದಾರರನ್ನಾಗಿ ಮಾತ್ರವೇ ಬಳಸಿಕೊಂಡು ಮೋಸ ಮಾಡುತ್ತವೆ. ಆದರೆ ಬಿಜೆಪಿ ಪಕ್ಷದಲ್ಲಿ ತಳ ಮಟ್ಟದಿಂದಲೂ ವಿಕೇಂದ್ರೀಕರಣ ವ್ಯವಸ್ಥೆ ಇದೆ. ಇಲ್ಲಿ ಪಕ್ಷಕ್ಕಾಗಿ ಸಮಯ ಕೊಡುವ ಎಲ್ಲರೂ ನಾಯಕರಾಗಬಹುದು ಎಂದು ಅವರು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ಮಹೇಶ್, ಮಹಿಳೆ ಉದ್ಧಾರವಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಜನರಿಗೆ ತಲುಪಿಸುವುದು ಮಹಿಳಾ ಮೋರ್ಚಾದವರ ಜವಾಬ್ದಾರಿ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮಹಿಳೆಯರು ವಿಪಕ್ಷಗಳ ಟೀಕೆಗೆ ತಕ್ಕ ಉತ್ತರ ನೀಡುವಂತಾಗಬೇಕು. ಬೆಲೆ ಏರಿಕೆ ಸೇರಿದಂತೆ ಬಿಜೆಪಿ ವಿರುದ್ಧ ಕೇಳಿಬರುವ ಅಪಪ್ರಚಾರಗಳಿಗೆ ಸಮರ್ಥವಾಗಿ ಉತ್ತರಿಸುವಂತಾಗಲು ಪ್ರಶಿಕ್ಷಣ ಶಿಬಿರ ಸಹಕಾರಿಯಾಗಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮಹಿಳಾ ಮೋರ್ಚಾ ಜಿಲ್ಲಾ ಉಸ್ತುವಾರಿ ಶಿವಕೃಷ್ಣಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಪುಷ್ಪಾ ವಾಲಿ, ಮೇಯರ್ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಮೀಳಾ ನಲ್ಲೂರು ಪ್ರಾರ್ಥಿಸಿದರು. ರೂಪಾ ಶಿವಕುಮಾರ್ ಸ್ವಾಗತಿಸಿದರು. ಮಂಗಳಾ ಕರಿಬಸಪ್ಪ ವಂದಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!