ಸುದ್ದಿ360 ದಾವಣಗೆರೆ, ಜು.02: ಜಿ.ಸಿ.ಬಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ , ಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ಸಿನಿಮಾ ಇದೇ ಬರುವ ಜು. 15 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನು ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿರುವ ಓ ಮೈ ಲವ್ ಚಿತ್ರ ಹಾಡುಗಳು, ಟೀಸರ್, ಗ್ಲಿಂಪ್ಸ್, ಹಾಗೂ ಟ್ರೇಲರ್ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದು, ದಿನದಿಂದ ದಿನಕ್ಕೆ ಸಿನಿಮಾ ನಿರೀಕ್ಷೆ ಹೆಚ್ಚುತ್ತಲೇ ಇದೆ ಎಂದು ಹೇಳಿದರು.
ತನ್ನ ತಂದೆಯ ಪ್ರೊಫೆಷನ್ನನ್ನೇ ಆಯ್ಕೆ ಮಾಡಿದ್ದೇನೆ ಆಶೀರ್ವದಿಸಿ
ಇದೇ ಮೊದಲ ಬಾರಿ ದಾವಣಗೆರೆಗೆ ಬಂದಿದ್ದೇನೆ. ನೀವುಗಳು ನನಗೆ ಆಶೀರ್ವಾದ ಮಾಡಲೇ ಬೇಕು ಎಂಬುದಾಗಿ ಮನವಿ ಮಾಡಿಕೊಂಡು ಮಾತು ಮುಂದುವರೆಸಿದ ‘ಓ ಮೈ ಲವ್’ ಚಿತ್ರದ ನಾಯಕ ನಟ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್, ನನ್ನ ತಂದೆ ನಾನು ಹುಟ್ಟುವ ಮೊದಲೇ ಒಂದು ಸುಸಜ್ಜಿತ ರಸ್ತೆ ರೆಡಿ ಮಾಡಿಟ್ಟಿದ್ದಾರೆ. ಅಪ್ಪನಿಂದಲೂ ಪ್ರಶಂಸೆ ಪಡೆದು, ಅವರ ಪ್ರೊಫೆಷನ್ನನ್ನೇ ಸೆಲೆಕ್ಟ್ ಮಾಡಿ ನಿಮ್ಮ ಮುಂದೆ ಬರ್ತಾ ಇದೇನೆ, ನನ್ನ ತಂದೆಗೆ ನೀವು ನೀಡಿದ ಪ್ರೋತ್ಸಾಹವನ್ನೇ ನನಗೂ ನೀಡಿ, ನಿಮ್ಮಗಳ ಆಶೀರ್ವಾದ ಬೇಕು ಎಂದು ಓ ಮೈ ಲವ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ತೆಲುಗು ಚಿತ್ರರಂಗದ ಸಿನಿಮಾ ಬ್ರಹ್ಮ ಕೆ. ರಾಘವೇಂದ್ರರಾವ್, ಮಾಜಿ ಪೊಲೀಸ್ ಆಯುಕ್ತರಾದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಹಾಡು ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ರಾಜಕೀಯ ಧುರೀಣ ಶ್ರೀರಾಮುಲು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಸಿನಿಮಾ ಕಥೆ ಬರೆದಿರುವ ಜಿ. ರಾಮಾಂಜಿನಿ ಜಿಸಿಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಸ್ಮೈಲ್ ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಎಲ್ಲಾ ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ, ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ನಿರ್ದೇಶನ, ಎಸ್ ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ಸಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್ ಸೇರಿದಂತೆ ಮೊದಲಾದವರು ತಾರಾಗಣದಲ್ಲಿದ್ದಾರೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿಚಿತ್ರದ ಹಾಡುಗಳು, ಟ್ರೇಲರ್ ಬಿಡುಗಡೆಯಾಗಿವೆ ಎಂದು ತಿಳಿಸಿದರು.
ಚಿತ್ರದ ನಾಯಕಿ ಕೀರ್ತಿ ಕಲ್ಕೇರಿ ಮಾತನಾಡಿ, ಇದು ನನ್ನ ನಟನೆಯ ಎರಡನೇ ಚಿತ್ರ, ಓ ಮೈ ಲವ್ ಚಿತ್ರ ಫ್ರೆಂಡ್ಶಿಪ್, ಫ್ಯಾಮಿಲಿ, ಲವ್ ಇವುಗಳು ಜೀವನದಲ್ಲಿ ಎಷ್ಟು ಮಹತ್ವ ವಹಿಸುತ್ತವೆ ಎಂಬುದನ್ನು ಚಿತ್ರ ಕಟ್ಟಿಕೊಟ್ಟಿದೆ, ಪಕ್ಕಾ ಕಮರ್ಷಿಯಲ್ ಮೂವಿಯಾಗಿದ್ದು, ಎಲ್ಲೂ ಬೋರ್ ಆಗುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಯಕಿ ಕೀರ್ತಿ ಕಲ್ಕೆರೆ, ಅಕ್ಷತಾ ಜಿ. ರಾಮಾಂಜಿನಿ, ರಾಘವೇಂದ್ರ ಇತರರು ಇದ್ದರು.