ಪಾಲಿಕೆ ವಿಪಕ್ಷ ನಾಯಕ : ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಗಂಭೀರ ಆರೋಪ
ಸುದ್ದಿ360 ದಾವಣಗೆರೆ, ಜು.02: ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಯುಜಿಡಿ ತುರ್ತು ಕಾಮಗಾರಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಕೂಡ ಕಾಂಗ್ರೆಸ್ ವಾರ್ಡ್ಗಳಿಗೆ ಹಣ ನೀಡದೆ ಆಡಳಿತ ಪಕ್ಷ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ. ಕಳೆದ 2020-21, 2021-22 ನೇ ಅವಧಿಯಲ್ಲಿ ಒಟ್ಟು 55 ಕೋಟಿ ರೂಪಾಯಿ ಟೆಂಡರ್ ಕರೆದಿದ್ದು, ಈ ಸಾಲಿನಲ್ಲಿ 20 ಕೋಟಿ ರೂಪಾಯಿ ಕೂರತೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಾಲಿಕೆ ಸಾಮಾನ್ಯ ನಿಧಿಯಲ್ಲಿ ಅನುದಾನ ಲಭ್ಯವಿಲ್ಲ ಎಂಬ ಸಿದ್ಧ ಉತ್ತರ ಬರುತ್ತದೆ. ಜೆಸಿಬಿ ಯಂತ್ರಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ ಎಂದು ಅಧಿಕಾರಿಯೊಬ್ಬರೇ ನನ್ನ ಬಳಿ ಹೇಳಿದ್ದಾರೆ. ಹಣವಿಲ್ಲ, ನೋಡಿ ಬಳಕೆ ಮಾಡಿ ಎನ್ನುತ್ತಾರೆ. ಪಾಲಿಕೆ ದಿವಾಳಿ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿಗಳು ಬೇಕಾ ಎಂದು ಹೇಳಿದರು.
ಈ ಹಿಂದಿನ ಮೇಯರ್ ಅವಧಿಯಲ್ಲಿ ಯಾವ ಮುಂದಾಲೋಚನೆ ಇಲ್ಲದೇ ಬಜೆಟ್ ನಲ್ಲಿ ಸುಮಾರು 30 ಕೋಟಿ ರೂಪಾಯಿ ಮುಂಗಡ ಮಾಡಿದ್ದರು. ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ 2ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಮಾನ್ಯ ನಿಧಿಯಲ್ಲಿ ನೀಡಿದ್ದರು. ಕಾಂಗ್ರೆಸ್ ನ ಪಾಲಿಕೆ ಸದಸ್ಯರಿಗೆ ನೀಡಿಲ್ಲ. ಇಂಥ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು.
ಗೋಪಿನಾಯ್ಕ ಅವರು ಮೇಯರ್ ಆಗಿ ನಾಲ್ಕು ತಿಂಗಳು ಪೂರ್ಣಗೊಂಡಿದ್ದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳಾಗಿಲ್ಲ. ಇಂಥ ಕೆಟ್ಟ ಆಡಳಿತ ಎಂದಿಗೂ ನೋಡಿಲ್ಲ
ಮೇಯರ್ ವಾರ್ಡ್ ಗೆ 1.50 ಕೋಟಿ ಎಲ್ಲಿಂದ ಬಂತು
ಮೇಯರ್ ಜಯಮ್ಮ ಗೋಪಿನಾಯ್ಕ ಪ್ರತಿನಿಧಿಸುವ ವಾರ್ಡ್ ಗೆ ಒಂದೂವರೆ ಕೋಟಿ ರೂಪಾಯಿ ಅನುದಾನ ಹಾಕಿಕೊಂಡಿದ್ದಾರೆ. ನಾವು ಕೇಳಿದರೆ ಅನುದಾನ ಇಲ್ಲ ಎನ್ನುವ ಮೇಯರ್ ಅವರ ವಾರ್ಡ್ ಗೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.
ಸ್ವಚ್ಛತಾ ಕಾರ್ಯಕ್ಕೆ ಪಾಲಿಕೆಗೆ ಸಾಕಷ್ಟು ಹೊಸ ವಾಹನಗಳು, ಸ್ವಚ್ಛತಾ ಪರಿಕರಗಳು ಬಂದಿದ್ದರೂ, ಸಮರ್ಪಕವಾಗಿ ಬಳಸದೇ ಇವುಗಳು ತುಕ್ಕು ಹಿಡಿಯುವ ಹಂತದಲ್ಲಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಇದಕ್ಕೆ ಯಾರು ಜವಾಬ್ದಾರಿ. ಪಾಲಿಕೆ ವ್ಯಾಪ್ತಿಯ ಸ್ವಿಮ್ಮಿಂಗ್ ಫೂಲ್ ಕಳೆದ ಮೂರು ವರ್ಷಗಳಿಂದ ನಿಂತಿದೆ. ಇದರಿಂದ ಈಜುಪಟುಗಳಿಗೆ ತೊಂದರೆ ಆಗಿದೆ. ಕೂಡಲೇ ಸರಿಪಡಿಸಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿಯಾಗಿದೆ. ಹಿತರಕ್ಷಣಾ ಸಮಿತಿಯ ಸದಸ್ಯರು ಒತ್ತಾಯಿಸಿದ್ದರೂ ದಪ್ಪ ಚರ್ಮದ ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂದಷ್ಟೇ ವೇಗದಲ್ಲಿ ಹಿಂದಿರುಗುವ ಸಚಿವರು
- ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಪಾಲಿಕೆಗೆ ಯಾವುದೇ ಅನುದಾನ ನೀಡಿಲ್ಲ. ಪಾಲಿಕೆ ಸದಸ್ಯರ ಸಭೆ ನಡೆಸಿ ಅಭಿವೃದ್ಧಿ ಬಗ್ಗೆ ಚರ್ಚಿಸಿ ಎಂಬ ಮನವಿ ಮಾಡಿದ್ದರೂ ಕ್ಯಾರೇ ಎಂದಿಲ್ಲ. ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ರವೀಂದ್ರನಾಥ್, ಪಾಲಿಕೆಯ ಬಿಜೆಪಿ ಸದಸ್ಯರು ಅನುದಾನ ತರುವುದರಲ್ಲಿ ವಿಫಲರಾಗಿದ್ದಾರೆ. ಮೊದಲೆಲ್ಲಾ ಬೆಳಿಗ್ಗೆ ಬಂದು ಸಂಜೆ ಹೋಗುತ್ತಿದ್ದ ಸಚಿವರು ಈಗ ಬಂದಷ್ಟೇ ವೇಗದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಕಾಟಾಚಾರಕ್ಕೆ ಸಭೆ ನಡೆಸಿ ಹೋದರೆ ದಾವಣಗೆರೆ ಅಭಿವೃದ್ಧಿಯಾಗುತ್ತದೆಯಾ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಇಟ್ಟಗುಡಿ ಮಂಜುನಾಥ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್, ಲಿಯಾಖತ್ ಅಲಿ, ಉಮೇಶ್ ಇತರರಿದ್ದರು.
ಡಿಜಿಪಿ ಆದೇಶ ಪಾಲಿಸದ ದಾವಣಗೆರೆ ಪೊಲೀಸರು
ಡ್ರಿಂಕ್ ಆಂಡ್ ಡ್ರೈವ್ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ವಿನಾ ಕಾರಣ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಕೂಡದು ಎಂಬುದಾಗಿ ಡಿಜಿಪಿ ಅವರೇ ಆದೇಶಿಸಿದ್ದಾರೆ. ಆದರೆ ಆ ಆದೇಶಕ್ಕೆ ದಾವಣಗೆರೆ ಪೊಲೀಸರು ಕಿಮ್ಮತ್ತು ನೀಡುತ್ತಿಲ್ಲ. ಅರುಣ ಚಿತ್ರಮಂದಿರ ವೃತ್ತ ಸೇರಿ ನಗರದ ಹಲವೆಡೆ ಸಿವಿಲ್ ಡ್ರೆಸ್ನಲ್ಲಿ ಪೊಲೀಸರು ವಾಹನ ಹಿಡಿಯುತ್ತಿದ್ದಾರೆ ಎಂದು ಪಾಲಿಕೆ ಪ್ರತಿಪಕ್ಷದ ಮಾಜಿ ನಾಯಕ ಎ. ನಾಗರಾಜ್ ದೂರಿದರು.