ಜು.12: ಶ್ರೀ ಜಯದೇವ ಮುರುಘರಾಜೇಂದ್ರ ಶ್ರೀಗಳ 65ನೇ ಸ್ಮರಣೋತ್ಸವ

ಸುದ್ದಿ360 ದಾವಣಗೆರೆ.ಜು.06: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65ನೇ ಸ್ಮರಣೋತ್ಸವ ಪ್ರಯುಕ್ತ ಜು.12ರಿಂದ 14ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಶ್ರೀಗಳು ಮಾಹಿತಿ ನೀಡಿದರು.

ಶ್ರೀಗಳ 65ನೇ ಸ್ಮರಣೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶರಣ ಸಂಸ್ಕೃತಿ ಉತ್ಸವ, ಮಹಾ ತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೊತ್ಸವ, ಜಯದೇವಶ್ರೀ ಶೂನ್ಯಪೀಠ ಪ್ರಶಸ್ತಿ ಪ್ರದಾನ,  ಡಾ.ಶಿವಮೂರ್ತಿ ಮುರುಘಾ ಶರಣರ ಶೂನ್ಯಪೀಠಾರೋಹಣದ ತೃತೀಯ ದಶಮಾನೋತ್ಸವ ಹಾಗೂ ಡಿ.ಲಿಟ್ ಕೃತಿ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮಗಳು ನಗರದ ಜಯದೇವ ವೃತ್ತದ ಬಳಿ ಇರುವ ಜಯದೇವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜು.12ರಂದು ಸಂಜೆ 6.30ಕ್ಕೆ ಸಾಧಕರ ಸಮಾವೇಶ ನಡೆಯಲಿದ್ದು, ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಇಳಕಲ್ ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳ ಸಾನಿಧ್ಯ ಹಾಗೂ ಗಣ್ಯಮಾನ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧಪಕ್ಷದ ನಾಯಕರೂ ಆದ ಸಿದ್ಧರಾಮಯ್ಯ  ಇವರಿಗೆ ‘ಜಯದೇವಶ್ರೀ’ ಹಾಗೂ  ವಿಧಾನ ಪರಿಷತ್ ಮಾಜಿ ಸಭಾಪತಿಗಳದ ಶಿವಮೊಗ್ಗದ ಡಿ.ಎಚ್.ಶಂಕರಮೂರ್ತಿ ಇವರಿಗೆ ‘ಶೂನ್ಯಪೀಠ ಅಲ್ಲಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಎರಡೂ ಪ್ರಶಸ್ತಿಗಳು ರೂ.50,000 ಮತ್ತು ಪ್ರಶಸ್ತಿಫಲಕವನ್ನೊಳಗೊಂಡಿದೆ.

‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಹಾವೇರಿ ಜಿಲ್ಲೆ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿ ಹಾಗೂ ‘ಶೂನ್ಯಪೀಠ ಚನ್ನಬಸವ’ ಪ್ರಶಸ್ತಿಗೆ ಸಾಹಿತಿಗಳಾದ ಹರಿಹರದ  ಎಚ್.ಎ. ಭಿಕ್ಷಾವರ್ತಿಮಠ ಇವರು ಭಾಜನರಾಗಿದ್ದು, ಈ ಎರಡೂ ಪ್ರಶಸ್ತಿಗಳು ರೂ.25,000 ಮತ್ತು ಪ್ರಶಸ್ತಿಫಲಕವನ್ನೊಳಗೊಂಡಿರುವುದಾಗಿ ತಿಳಿಸಿದರು.

ಜು.13ರಂದು ಸಂಜೆ 6.30ಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ‘ದಿವ್ಯಪಥ ಲೋಕಹಿತ’ ಗ್ರಂಥವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್, ಲೋಕಸಭಾ ಸದಸ್ಯರಾದ ಜಿ.ಎಂ. ಸಿದ್ದೇಶ್ವರ, ಶಾಸಕರಾದ  ಎಸ್ ಎ. ರವೀಂದ್ರನಾಥ್, ವಿಧಾನ ಪವಿಷತ್ ಮಾಜಿ ಸದಸ್ಯರಾದ  ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಮಹಾಪೌರರಾದ ಬಿ.ಜೆ. ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪಾಲ್ಗೊಳ್ಳಲಿದ್ದಾರೆ.

ಜು.14ರಂದು ಬೆಳಗ್ಗೆ 7.30ಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಸಹಜ ಶಿವಯೋಗ ಕಾರ್ಯಕ್ರಮ ನಡೆಯಲಿದೆ. 

ಅಂದು ಬೆಳಗ್ಗೆ 10 ಗಂಟೆಗೆ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ ಹಾಗೂ ಚಿಗಟೇರಿ ಜಿಲ್ಲಾ ಸಾರ್ವಜನಿಕ  ಆಸ್ಪತ್ರೆ ಸಹಯೋಗದೊಂದಿಗೆ ಬಸವಕೇಂದ್ರ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ನಡೆಯಲಿದೆ.

ಸಂಜೆ 6.30ಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಅಭಿನಂದನೆ ಮತ್ತು ಶ್ರೀಗಳು ಮಂಡಿಸಿರುವ ‘ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ’ ಕುರಿತಾದ ಡಿ.ಲಿಟ್ ಕೃತಿಯನ್ನು ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ  ಇವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್. ಓಂಕಾರಪ್ಪ, ಕಣಕುಪ್ಪಿ ಮುರುಗೇಶಪ್ಪ, ಎನ್. ಜಯಕುಮಾರ್, ಡಾ. ಸಿ. ಆರ್. ನಾಸಿರ್ ಅಹ್ಮದ್, ಎಂ. ಜಯಕುಮಾರ್, ಹಾಸಬಾವಿ ಕರಿಬಸಪ್ಪ, ಕುಂಟೋಜಿ ಚನ್ನಪ್ಪ ಮತ್ತಿತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!