ದಾವಣಗೆರೆ, ಮೇ ೨೪: ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಧ್ಯಾಪಕರು ಹೆಚ್ಚು ಜವಾಬ್ದಾರರಾಗಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಧ್ಯಾಪಕರು ಜಡ್ಡುಗಟ್ಟಿದ ನಿಂತ ನೀರಾಗದೆ ಸದಾ ಹರಿಯುವ ನೀರಾಗಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ನಗರದ ಎವಿ ಕಮಲಮ್ಮ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಕೋಶ ಘಟಕದ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಿಸಲೇ ಬೇಕಿದೆ. ಪ್ರಥಮ ವರ್ಷದ ಪದವಿ ಹಂತದಲ್ಲೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸಬೇಕು. ಹಾಗೆ ಸಜ್ಜುಗೊಳಿಸಿದ್ದೇ ಆದಲ್ಲಿ ನಮ್ಮ ಕಾಲೇಜಿನ ಸೇವೆ ಸಮಾಜಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳ ಪ್ರಗತಿಗೆ ನಿರಂತರ ಶ್ರಮಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಕಾಲೇಜಿನ ಸಮಯದಲ್ಲಿ ಅಧ್ಯಾಪಕರು ಲಭ್ಯವಿರಬೇಕು. ಹೆಚ್ಚು ಸಮಯವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವುದರ ಮೂಲಕ ಕಳೆಯಬೇಕು ಎಂದು ಹೇಳಿದರು.
ಕಾಲೇಜಿನ ಐಕ್ಯೂಎಸಿ ಘಟಕದ ಸದಸ್ಯ ಡಾ.ಜೆ.ಬಿ.ರಾಜ್ ಮಾತನಾಡಿ, ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಬೇಕು. ಸಂಶೋಧನ ಲೇಖನಗಳನ್ನು ಬರೆದು ಯುಜಿಸಿಯಿಂದ ಮಾನ್ಯತೆ ಪಡೆದ ನಿಯತಕಾಲಿಕೆಗಳಲ್ಲಿ ಪ್ರಕಟಿಸಬೇಕು. ಯುಜಿಸಿಯಿಂದ ಅನೇಕ ಯೋಜನೆಗಳ ಅಡಿಯಲ್ಲಿ ಸಂಶೋಧನೆಗೆ ಹಣವನ್ನು ನೀಡಲಾಗುತ್ತದೆ. ಇಂತಹ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಪ್ರಯೋಜನ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ.ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನಾವು ನೀಡಬೇಕು. ಬೇರೆ ಕಾಲೇಜಿಗಿಂತ ಭಿನ್ನವಾಗಿ ನಮ್ಮ ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ಈ ವೇಳೆ ಐಕ್ಯೂಎಸಿ ಸಂಯೋಜಕ ಪ್ರೊ.ಆರ್.ಆರ್.ಶಿವಕುಮಾರ್, ನ್ಯಾಕ್ ಸಂಯೋಜಕಿ ಪ್ರೊ.ಜಿ.ಸಿ.ನೀಲಾಂಬಿಕ, ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.