ವಿದ್ಯಾರ್ಥಿಗಳಿಗೆ ರೆಡ್‌ಕ್ರಾಸ್ ಜಿಲ್ಲಾ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಕಿವಿಮಾತು
ಸುದ್ದಿ360, ದಾವಣಗೆರೆ, ಜು.9: ಯುವ ಪೀಳಿಗೆ ಹೊಗೆ ಉಗುಳುವುದರಲ್ಲಿ, ಮದ್ಯ ಸೇವನೆಯಲ್ಲಿ ಕಿಕ್ ಕಂಡುಕೊಳ್ಳುತ್ತಿದೆ. ಅದರ ಬದಲು, ದೇಹ ಮತ್ತು ಮನಸನ್ನು ಸ್ಥಿಮಿತದಲ್ಲಿಡುವ ವಿವಿಧ ಆಟಗಳಲ್ಲಿ, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವುದರಲ್ಲಿ ಹಾಗೂ ಉತ್ತಮ ಆಹಾರ ಸೇವಿಸುವುದರಲ್ಲಿ ಕಿಕ್ ಕಂಡುಕೊಂಡರೆ ಜೀವನ ಉತ್ತಮವಾಗುವುದರ ಜೊತೆಗೆ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ರೆಡ್‌ಕ್ರಾಸ್ ಜಿಲ್ಲಾ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಡಿಆರ್‌ಎಂ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಡಿಆರ್‌ಎಂ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಕ್ರಿಯೇಟಿವ್ ಅಥವಾ ಸೃಜನಾತ್ಮಕ ಕೆಲಸ ಮಾಡುವ ಕಲಾವಿದರು, ಸಾಹಿತಿ, ಬರಹಗಾರರು, ಡಿಸೈನರ್‌ಗಳು ಮದ್ಯ, ಸಿಗರೇಟು ಸೇವಿಸಿದಾಗಲೇ ಅವರ ತಲೆಯಲ್ಲಿ ಹೊಸ ಹೊಸ ಆಲೋಚನೆಗಳು ಹುಟ್ಟುತ್ತವೆ ಎಂಬ ತಪ್ಪು ಕಲ್ಪನೆ ಕೆಲವು ಮಕ್ಕಳಲ್ಲಿ ಇದೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ. ಸೃಜನಶೀಲತೆ ಬರುವುದು ನಮ್ಮ ಆಲೋಚನೆಗಳಿಂದ. ನಾವು ಸದಾ ಹಾಡು, ಕುಣಿತ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ದುಶ್ಚಟಗಳ ಅಗತ್ಯವೇ ಇರುವುದಿಲ್ಲ ಎಂದು ನಟ, ಕಲಾವಿದ ಆರ್.ಟಿ. ಅರುಣ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಹೇಮಾವತಿ, ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ದುಶ್ಚಟ ಎಷ್ಟೇ ಹಳೆಯದಾದರೂ ಇರಲಿ, ಎಷ್ಟೇ ಗಾಢವಾಗಿರಲಿ, ದೃಢ ಸಂಕಲ್ಪ ಮಾಡಿದರೆ ಅದರಿಂದ ಹೊರಬರುವುದು ಅಷ್ಟೇನು ಕಷ್ಟದ ಕೆಲಸವಲ್ಲ. ಹೀಗಾಗಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವ ದುಶ್ಚಟವೂ ಹತ್ತಿರ ಸುಳಿಯುವುದಿಲ್ಲ ಎಂದರು.
ಡಿಆರ್‌ಎಂ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಆರ್. ವನಜಾ ಮಾತನಾಡಿ, ಎಲ್ಲ ಮಾದಕ ವಸ್ತುಗಳನ್ನು ಮುಕ್ತವಾಗಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿರಿಸುವುದು. ನಂತರ ಅವುಗಳನ್ನು ಸೇವಿಸಬೇಡಿ. ಅದರಿಂದ ಆರೋಗ್ಯ ಹಾಳಾಗುತ್ತದೆ ಎಂದು ನಿರ್ಬಂಧಿಸುವ ಬದಲು ಎಲ್ಲಾ ಮಾದಕ ವಸ್ತುಗಳನ್ನು ಶಾಶ್ವತವಾಗಿ ನಿಷೇಧಿಸುವುದು ಉತ್ತಮ ಎಂದು ಹೇಳಿದರು.
18-20ನೇ ವಯಸ್ಸಿನವರೇ ಹೆಚ್ಚಾಗಿ ಈ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕುತೂಹಲಕ್ಕಾಗಿ ಮಧ್ಯಪಾನ, ಧೂಮಪಾನ, ಗಾಂಜಾ ಸೇವನೆಯಂತಹ ಕೆಟ್ಟ ಚಟ ಆರಂಭಿಸುವ ಮಕ್ಕಳು, ಕೆಲವೇ ದಿನಗಳಲ್ಲಿ ಅವುಗಳ ದಾಸರಾಗಿಬಿಡುತ್ತಾರೆ. ಯಾರದೋ ಒತ್ತಾಯಕ್ಕೆ ದುಶ್ಚಟ ಆರಂಭಿಸಿ, ಜೀವನ ಹಾಳುಮಾಡಿಕೊಳ್ಳುವ ಮೊದಲು ಮಕ್ಕಳು ಅದರ ದುಷ್ಪರಿಣಾಮಗಳ ಬಗ್ಗೆ ಯೋಚಿಸಬೇಕು. ಯಾರೇ ಸಿಗರೇಟು, ಮದ್ಯ ಸೇವನೆಗೆ ಬಲವಂತ ಮಾಡಿದರೂ ‘ಬೇಡ’ ಎನ್ನುವುದೊಂದೇ ನಿಮ್ಮ ಉತ್ತರವಾಗಿರಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಹೆಚ್ಚುವರಿ ಎಸ್‌ಪಿ ರವಿ ನಾರಾಯಣ್ ಮಾತನಾಡಿ, ಮಾದಕ ವಸ್ತು ಕಳ್ಳ ಸಾಗಣೆ ಮತ್ತು ಸೇವನೆ ತಡೆಗೆ ಹಲವು ಕಠಿಣ ಕಾನೂನು ಜಾರಿಯಲ್ಲಿವೆ. ಆದರೆ ಅವುಗಳ ಸಮರ್ಪಕ ಅನುಷ್ಠಾನ ಆಗಬೇಕಿದೆ. ಇದಕ್ಕೆ ಸಂಬಂಧಪಟ್ಟವರು ಇಚ್ಛಾಶಕ್ತಿ ತೋರಿದಲ್ಲಿ ಇದು ಸಾಧ್ಯ. ದೇಶದಲ್ಲಿ ಶಸ್ತ್ರಾಸ್ತ್ರ ಬಿಟ್ಟರೆ ಹೆಚ್ಚು ಕಳ್ಳಸಾಗಣೆ ಆಗುವುದೇ ಮಾದಕ ವಸ್ತುಗಳು. ಸರಕಾರ ಇದನ್ನು ತಡೆಯುವಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ರೆಡ್‌ಕ್ರಾಸ್ ಉಪಾಧ್ಯಕ್ಷ ಗೌಡರ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಎ. ಉಮೇಶ್ ಶೆಟ್ಟಿ, ನೋಡಲ್ ಅಧಿಕಾರಿ ಡಾ.ಡಿ. ಕೊಟ್ರೇಶ್, ಕಾಲೇಜಿನ ಕಮಲಾ ಸೊಪ್ಪಿನ್ ಇತರರಿದ್ದರು.