ಶರಣರ ಸಮ ಸಮಾಜದ ಮಾರ್ಗದಲ್ಲಿ ಸಾಗಬೇಕಿದೆ : ಡಾ.ಬಿ.ಪಿ. ಕುಮಾರ್
ಸುದ್ದಿ360, ದಾವಣಗೆರೆ, ಜು.9: ವಚನಗಳಲ್ಲಿ ಜಾತಿ, ಮತ, ಪಂಥ, ವರ್ಗ, ವರ್ಣ, ಲಿಂಗ ತಾರತಮ್ಯ, ಪ್ರಾದೇಶಿಕ ಭಿನ್ನತೆ ಹೀಗೆ ಹತ್ತು ಹಲವಾರು ತಾರತಮ್ಯದ ವಿಚಾರಗಳಿಗೆ ಪರಿಹಾರ ಸೂಚಿಸಲಾಗಿದ್ದು, ಶರಣರು ಹಾಕಿಕೊಟ್ಟ ಸಮ ಸಮಾಜದ ಮಾರ್ಗದಲ್ಲಿ ನಮಗೆ ಸಾಗಲು ಆಗುತ್ತಿಲ್ಲ ಎಂದು ಎ.ವಿ ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ವಿಷಾದಿಸಿದರು.
ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜಿನಲ್ಲಿ ಶನಿವಾರ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ರಚನೆಯಾಗಿರುವ ವಚನ ಸಾಹಿತ್ಯ ಸರ್ವಕಾಲಕ್ಕೂ ಅನ್ವಯವಾಗುವಂತಹದ್ದಾಗಿದೆ. ಜಾಗತಿಕ ಮನ್ನಣೆ ಪಡೆದಿರುವ ವಚನಗಳು ಅನುಭಾವದ ಪ್ರಮಾಣಬದ್ಧ ಸಾಲುಗಳಾಗಿವೆ. ವಚನ ಸಾಹಿತ್ಯ ಭಾರತ ಮಾತ್ರವಲ್ಲದೆ ವಿಶ್ವ ಸಾಹಿತ್ಯದ ಭಂಡಾರವಾಗಿದೆ ಎಂಬುದಾಗಿ ಅವರು ತಿಳಿಸಿದರು.
ಭಾರತವು ಹಲವು ಜಾತಿ, ಮತ, ಧರ್ಮಗಳ ದೇಶ. ಇಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂದು ಸಂವಿಧಾನ ಹೇಳಿದೆ. ಅದರ ಆಶಯದಂತೆ ನಮ್ಮ ಶರಣರೆಲ್ಲರೂ ಕೂಡಿ ಬಾಳಿದ ಕಾಲ 12ನೇ ಶತಮಾನವಾಗಿತ್ತು. ಆದರೆ, ಇಂದು ಜಾತಿ, ಧರ್ಮ ಸಂಘರ್ಷಗಳು ಹೆಚ್ಚಾಗಿವೆ ಎಂದರು.
ಮನಃಶಾಸ್ತ್ರ ಪ್ರಾಧ್ಯಾಪಕ ಪಾಲಾಕ್ಷ ಮಾತನಾಡಿ, ಇಂದಿನ ಸಾಮಾಜಿಕ ಪರಿಸ್ತಿತಿಯಲ್ಲಿ ವಚನಗಳನ್ನು ಹೊಸ ದೃಷ್ಟಿಕೋನದಿಂದ ಅಧ್ಯಯನ ಮಾಡುವ ತುರ್ತು ಅಗತ್ಯವಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣೀರ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಸಾಹಿತ್ಯದ ಅಮೂಲ್ಯ ವಿಚಾರಧಾರೆಗಳನ್ನು ವಿದ್ಯಾರ್ಥಿನಿಯರಿಗೆ ತಲುಪಿಸುವ ಉದ್ದೇಶದೊಂದಿಗೆ ಕನ್ನಡ ವಿಭಾಗವು 10 ದಿನಗಳ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಹೇಳಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಜಿ. ಕವಿತಾ, ಡಾ.ಎಚ್.ಎಂ. ಲೋಹಿತ್, ಎಂ. ಸಹನಾ ಇತರರಿದ್ದರು.