ಸುದ್ದಿ360, ಕೋಲಾರ, ಜು.9: ಚಾಕೊಲೇಟ್, ಗುಟ್ಕಾ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೋಲಾರ ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಕುರುಗಲ್ ಕ್ರಾಸ್ನಲ್ಲಿ ಈ ರೀತಿಯಾಗಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಶುಭಂ ಎಂಬಾತನನ್ನು ಬಂಧಿಸಿ, 17 ಕೆ.ಜಿ. ತೂಕದ ಗಾಂಜಾ ಚಾಕೊಲೇಟ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಮಹಾಕಾಲ್ ಎಂಬ ಹೆಸರಿರುವ ಈ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಚಾಕೋಲೇಟ್ ರೂಪದಲ್ಲಿ ಉಂಡೆ ಮಾಡಿ, ಚಿಲ್ಲರೆ ಅಂಗಡಿ, ಬೀಡಾ, ಡಾಬಾ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
4.62 ಲಕ್ಷ ಮೌಲ್ಯದ ಒಟ್ಟು 2,964 ಚಾಕೊಲೇಟ್ ಪೊಟ್ಟಣಗಳು ಇದ್ದವು ಎಂದು ಅಬಕಾರಿ ಆಯುಕ್ತ ರಮೇಶ ತಿಳಿಸಿದ್ದಾರೆ.
ಅಬಕಾರಿ ಇನ್ಸ್ಪೆಕ್ಟರ್ ಎ. ಆರ್. ಅರುಣಾ, ಸಬ್ ಇನ್ಸ್ಪೆಕ್ಟರ್ ಜಯಣ್ಣ, ಕಾನ್ಸ್ಟೇಬಲ್ ಅನಿಲ್ ಇತರರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.