ಸುದ್ದಿ360 ರಾಮನಗರ, ಸೆ.21: ವಸತಿ ಶಾಲೆಯೊಂದರಲ್ಲಿ ಮುಖ ತೊಳೆಯಲು ಹೋದ ಸಂದರ್ಭದಲ್ಲಿ ನೀರಿನ ತೊಟ್ಟಿಯ ಗೋಡೆ ಕುಸಿದು ಬಿದ್ದ ಪರಿಣಾಮ ಓರ್ವ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಿಡದಿ ಹೋಬಳಿ ಹೆಚ್.ಗೊಲ್ಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ಬಾಲಕ ಕೌಶಿಕ್ ಗೌಡ(12) ಈತ ವಸತಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿ. ಬೆಳಿಗ್ಗೆ 8.30 ಸಮಯದಲ್ಲಿ ಮುಖ ತೊಳೆಯಲು ತೊಟ್ಟಿಯ ಬಳಿ ಬಂದಾಗ ಏಕಾಏಕಿ 5 ಅಡಿ ಎತ್ತರದ ಗೋಡೆ ಉರುಳಿ ಬಿದ್ದಿದೆ. ಇಬ್ಬರು ಬಾಲಕರ ಮೇಲೆ ಬಿದ್ದಿದ್ದು, ಪರಿಣಾಮ ಈರ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಬಾಲಕರನ್ನು ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸುವ ವೇಳೆ ಒಬ್ಬ ಬಾಲಕ ಮೃತಪಟ್ಟಿದ್ದು ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸುದ್ದಿತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.