ಸುದ್ದಿ360 ದಾವಣಗೆರೆ ಸೆ.12: ಸಾರ್ವಜನಿಕರ ಸಮಸ್ಯೆ ಅರಿಯಲು ಆಮ್ ಆದ್ಮಿ ಪಕ್ಷದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ `ಎಲ್ಲಾ ಸೇರೋಣ; ಬನ್ನಿ ಮಾತಾಡೋಣ’ ಎಂಬ ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಮಾಡಿ, ಶಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ 15-20 ಗ್ರಮಗಳನ್ನು ಒಳಗೊಂಡಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು ಎರಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೆ ತುಮಕೂರು, ಚಿತ್ರದುರ್ಗದಲ್ಲಿ ಕಾರ್ಯಕ್ರಮ ನಡೆಸಿದ್ದು, ಮಂಗಳವಾರ ದಾವಣಗೆರೆಯ ರೋಟರಿ ಬಾಲಭವನ ಹಾಗೂ ಮಾಯಕೊಂಡ ಕ್ಷೇತ್ರದ ವಡ್ಡಿನಹಳ್ಳಿಯಲ್ಲಿ ಸಂವಾದ ಕಾರ್ಯಕ್ರಮ ನಡೆಸಲಾಗಿದೆ ಎಂದು ವಿವರಿಸಿದರು.
ಚುನಾವಣೆನಂತರ ಗ್ಯಾರಂಟಿ ಇರೋದಿಲ್ಲ!
ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇವು ತಾತ್ಕಾಲಿಕವಾಗಿ ಇರುತ್ತವೆಯಷ್ಟೇ ಎಂದು ಹೇಳಿದ ಮುಖ್ಯಮಂತ್ರಿ ಚಂದ್ರುರವರು, ಚುನಾವಣೆ ಮುಗಿಯುತ್ತಲೇ ಯಾವ ಗ್ಯಾರಂಟಿಯೂ ಇರುವುದಿಲ್ಲ. ದೆಹಲಿಯ ಆಪ್ ಸರಕಾರದ ಮಾದರಿ ಯೋಜನೆಗಳನ್ನು ಕದ್ದಿರುವ ಕಾಂಗ್ರೆಸ್ ಚುನಾವಣೆ ದೃಷ್ಟಿಯಿಂದ ಮಾತ್ರ ಜಾರಿಗೊಳಿಸಿದೆ. ಆದರೆ ವೈಜ್ಞಾನಿಕವಾಗಿ ಆಗುಹೋಗುಗಳ ಬಗ್ಗೆ ಚಿಂತನೆ ಮಾಡದೆ, ಇದಕ್ಕಾಗಿ 80 ಸಾವಿರ ಕೋಟಿ ರೂ. ಸಾಲ ಮಾಡಲಾಗಿದೆ. ಬಜೆಟ್ ಬಗ್ಗೆ ಯೋಚಿಸದೆ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿಗತಗೊಂಡಿರುವುದಾಗಿ ಅವರು ಆರೋಪಿಸಿದರು.
ವಿಧಾನಸಭೆ ಚುನಾವಣೆ ವೇಳೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಹೊರತಾಗಿಯೂ ರಾಜ್ಯದ ಜನತೆ ನಮ್ಮ ಪಕ್ಷ ಬೆಂಬಲಿಸಲಿಲ್ಲ. ಹೀಗಾಗಿ ಈ ಬಾರಿ ನಾವೇ ಸಾರ್ವಜನಿಕರ ಬಳಿ ಹೋಗಿ ಅವರ ಅಭಿಪ್ರಾಯ, ಆದ್ಯತೆ, ಬೇಡಿಕೆ ಆಲಿಸಲಿದ್ದೇವೆ ಎಂದರು.
ಸಂವಾದದ ಪ್ರಮುಖ ಆರು ವಿಷಯಗಳು:
- ಶಿಕ್ಷಣದ ಗುಣಮಟ್ಟ ಸರಿಪಡಿಸದೇ ಏಳಿಗೆ ಸಾಧ್ಯವೇ?
- ಆರೋಗ್ಯ ವ್ಯವಸ್ಥೆ ಸರಿ ಪಡಿಸದೇ ಸಮಾಜ ಸದೃಢವಾಗಿರಲು ಸಾಧ್ಯವೇ?
- ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗದಿದ್ದರೆ ರೈತನ ಋಣ ತೀರಿಸುವುದು ಸಾಧ್ಯವೇ?
- ಮಹಿಳೆಯರಿಗೆ ಸಮಾನ ಅವಕಾಶ ಇಲ್ಲದೆ, ಸಮಾಜದ ಏಳಿಗೆ ಸಾಧ್ಯವೇ?
- ಭ್ರಷ್ಟಾಚಾರ ತಾಂಡವಾಡುತ್ತಿದ್ದರೆ ಶಿಷ್ಟಾಚಾರದ ಜೀವನ ಸಾಧ್ಯವೇ?
- ಯುವಕರಿಗೆ ಅವಕಾಶ, ಉದ್ಯೋಗ, ಕಲ್ಪಿಸದೇ ದೇಶದ ಅಭಿವೃದ್ಧಿ ಸಾಧ್ಯವೆ?
ಗೋಷ್ಠಿಯಲ್ಲಿ ಉಮಾ ಶಂಕರ್, ಶಿವಕುಮಾರಪ್ಪ, ಅರುಣ್ ಕುಮಾರ್, ಗಣೇಶ್ ದುರ್ಗದ, ಆದಿಲ್ ಖಾನ್, ಕೆ. ರವೀಂದ್ರ, ಕೆ.ಎಲ್. ರಾಘವೇಂದ್ರ, ಸುರೇಶ್, ಅಜಿತ್, ಬಸವರಾಜ್ ಇತರರು ಇದ್ದರು.