ನಾಡಿನ ಮಹತ್ವದ ಚಿಂತನೆಗಳ ಪ್ರೇರಕ ಶಕ್ತಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ: ಎಲ್ ಎಸ್ ಪ್ರಭುದೇವ್

ಸುದ್ದಿ360, ದಾವಣಗೆರೆ ಸೆ.16:  ಈ ನಾಡಿನ ಮಹತ್ವದ ಚಿಂತನೆಗಳ, ಯೋಜನೆಗಳ ಪ್ರೇರಕ ಶಕ್ತಿ ಯಾಗಿದ್ದವರು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಎಂದು ವಿಶ್ರಾಂತ ಕಾರ್ಯನಿರ್ವಾಹಕ ಅಧಿಕಾರಿ,ಇಂಜಿನಿಯರ್ ಎಲ್ ಎಸ್ ಪ್ರಭುದೇವ್ ತಿಳಿಸಿದರು.

ಅವರು ಶುಕ್ರವಾರ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿಇಎ  ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತರತ್ನ  ಸರ್ ಎಂ ವಿಶ್ವೇಶ್ವರಯ್ಯ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡುತ್ತಾ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯನವರ ಜೀವನವನ್ನು ಆದರ್ಶವನ್ನಾಗಿಟ್ಟುಕೊಳ್ಳಲು ತಿಳಿಸಿದರು.

ನೂರಾ ಎರೆಡು ವರ್ಷಗಳ ತುಂಬ ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತ ಕಾಲದಲ್ಲಿಯೇ ದಂತಕತೆಯಾದವರು, ಜಗತ್ಪ್ರಸಿದ್ಧವರಾದರು.

 ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವು ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯ ವಿಧಾತ, ಆಧುನಿಕ ಮೈಸೂರಿನ ನಿರ್ಮಾತೃ ವಾಗಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ಮಾತನಾಡುತ್ತಾ  ” ಯಾವುದೇ ಕೆಲಸ ಕೀಳಲ್ಲ, ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಛ ರಸ್ತೆಯಾಗುವಂತೆ  ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ ” ಎಂದು ಹೇಳುತ್ತಿದ್ದವರು ಮೋಕ್ಷಗುಂಡಂ ವಿಶ್ವ ವಿಶ್ವೇಶ್ವರಯ್ಯನವರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣ ಕರ್ತರೂ ಆಗಿದ್ದಾರೆ ಎಂದು ತಿಳಿಸಿದರು.

ಇವರು 1861 ಸೆಪ್ಟೆಂಬರ್ 15 ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ, ವೆಂಕಟ ಲಕ್ಷ್ಮಮ್ಮನವರ ಪುತ್ರನಾಗಿ  ಜನಿಸಿದರು. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದ ಇವರು ಮುಂದೆ ಬೆಂಗಳೂರಿನ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ ಪಡೆದು ವಿಶಿಷ್ಟ ದರ್ಜೆಯಲ್ಲಿ ಪಾಸಾಗಿದ್ದಕ್ಕೆ ಪುಣೆಯಲ್ಲಿ ಇಂಜಿನಿಯರಿಂಗ್ ಓದಲು ವಿದ್ಯಾರ್ಥಿ ವೇತನ ಲಭಿಸಿತು. ನಂತರ ಬಾಂಬೆ  ಪಿ.ಡಬ್ಲ್ಯೂ. ಡಿ. ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನೌಕರಿ ದೊರೆಯಿತು ಎಂದು ವಿಶ್ವೇಶ್ವರಯ್ಯನವರ ಬಾಲ್ಯ ಮತ್ತು ವಿದ್ಯಾಭ್ಯಾಸ ಕುರಿತಾಗಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ  ಮನೋಜ್ಞವಾಗಿ ವಿವರಿಸಿದರು.

 ಕಾರ್ಯಕ್ರಮದ ಉದ್ಘಾಟನೆಯನ್ನು ಬಿಇಎ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎ ಜೆ ನೀತ  ನೆರವೇರಿಸಿ ವಿಶ್ವೇಶ್ವರಯ್ಯನವರ  ಸಾಧನೆ ಕುರಿತಾಗಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ದಾವಣಗೆರೆ ಲೋಕೋಪಯೋಗಿ ಇಲಾಖೆಯ ವಿಶ್ರಾಂತ ಸಹಾಯಕ ಕಾರ್ಯಪಾಲಕ ಅಭಿಯಂತರರಾದ  ವೈ ಎನ್ ರಂಗನಾಥ್  ಮಾತನಾಡುತ್ತಾ ವಿಶ್ವೇಶ್ವರಯ್ಯನವರಲ್ಲಿ ಇದ್ದಂತಹ ದೇಶಭಕ್ತಿ, ಕಾರ್ಯತತ್ಪರತೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಮಹಾಲಿಂಗರಂಗ ಪ್ರಶಸ್ತಿ ಪುರಸ್ಕೃತ  ಬಾ ಮಾ ಬಸವರಾಜಯ್ಯ,,ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ ದಿಳ್ಳಪ್ಪ, ಕೋಶಾಧ್ಯಕ್ಷರಾದ ಕೆ ರಾಘವೇಂದ್ರನಾಯರಿ, ಎಚ್ ಎನ್ ಶಿವಕುಮಾರ್, ಎ ಮಹಾಲಿಂಗಪ್ಪ, ನಿರುತ್ತಾ ನೌಕರರ ಸಂಘದ ನಿಕಟಪೂರ್ವ  ಕಾರ್ಯದರ್ಶಿ, ಬಿ ಕೆ ರೇಣುಕಾ ಮೂರ್ತಿ  ಕಾಲೇಜಿನ ಪ್ರಾಧ್ಯಾಪಕರು ಹಾಗೂ ನೌಕರರು ಇಂಜಿನಿಯರ್ ಸಮೂಹವೇ   ಉಪಸ್ಥಿತರಿದ್ದರು.

 ಬಿಇಎ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ತನುಶ್ರೀ ಪ್ರಾರ್ಥನೆಯನ್ನು, ಕಲ್ಮನೆ ಉದಯ್ ಕುಮಾರ್ ಸ್ವಾಗತವನ್ನು, ಹಾಗೂ ಜ್ಯಾಸ್ಮಿನ್ ತಾಜ್ ತರ್ನಾಳ್ ನಿರೂಪಣೆಯನ್ನು ಮಾಡಿದರು ಕೊನೆಯಲ್ಲಿ ನಿರೂಪ ಬಿ ವಂದಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!