ಗೃಹಿಣಿಯರ ಸಾಹಿತ್ಯದೊಲವಿನಿಂದ ಸಮಾಜಕ್ಕೆ ಬೆಳಕು: ಶಿವಾನಂದ ತಗಡೂರು ಅಭಿಮತ

ದಾವಣಗೆರೆ: ಬದುಕಿನ ಜಂಜಾಟದಲ್ಲಿ ಮುಳುಗಿರುವ ಗೃಹಿಣಿಯರು ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯಾಸಕ್ತಿ ಹಾಗೂ ಬರವಣಿಗೆಯೊಂದಿಗೆ ಬೆಸೆದುಕೊಂಡಲ್ಲಿ ಹೊರಗಿನ ಜಗತ್ತಿಗೆ ಬೆಳಕನ್ನು ನೀಡಬಹುದು. ಇಂತಹ ತುಡಿತ ಹೊಂದಿರುವ ಶ್ರೀಮತಿ ಅನುಪಮ ವಿರುಪಾಕ್ಷಪ್ಪ ಅವರ ಸಾಹಿತ್ಯ ಕೃಷಿ ಶ್ಲಾಘನೀಯವಾದುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.

ಅವರು ಎ.ವಿ.ಪ್ರಕಾಶನ, ದಾವಣಗೆರೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಅನುಪಮ ವಿರುಪಾಕ್ಷಪ್ಪ ಅವರ ದ್ವಿತೀಯ ಕವನ ಸಂಕಲನ‌ ‘ಭಾವಗಳ ಬಿಂಬ’ (BHAVAGALA BIMBA) ಕೃತಿಯನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

ಇಂದಿನ ಮೊಬೈಲ್ ವಾಟ್ಸ ಅಪ್ ಗಳೊಂದಿಗೆ ಬೆಸೆದುಕೊಂಡಿರುವವವರ ಮದ್ಯದಲ್ಲಿ ಬರವಣಿಗೆಯ ಮೂಲಕ ಭಾವನೆಗಳನ್ನು ಹಿಡಿದಿಡುವ ಪ್ರಯತ್ನ ಶ್ಲಾಘನೀಯ. ಶ್ರೀಮತಿ ಅನುಪಮ ಅವರ ಸೂಕ್ಷ್ಮ ಸಂವೇದನೆ ಕವಿತೆಗಳ ಕುಸರಿಯಲ್ಲಿಅನಾವರಣಗೊಂಡಿದೆ ಎಂದರು.

ಬದುಕಿನ  ಯಾನ ಯಾವಾಗ? ಎಲ್ಲಿ? ಹೇಗೆ? ಮುಗಿದು ಹೋಗುತ್ತದೆಯೋ ಯಾರಿಗೂ ತಿಳಿದಿಲ್ಲ. ಜೀವಿತಾವಧಿಯಲ್ಲಿ ಸಮಾಜಕ್ಕೆ ಏನು ಸಹಾಯ ಮಾಡಲು ಸಾಧ್ಯ ಎಂಬ ನಿಟ್ಟಿನಲ್ಲಿ ಯೋಚಿಸಿ ಬದುಕಿದಾಗ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕವಯಿತ್ರಿ ಅನುಪಮ ವಿರುಪಾಕ್ಷಪ್ಪ ಮಾತನಾಡಿ, ನಮ್ಮ ಸುತ್ತ ಮುತ್ತ ಕಂಡದ್ದು, ಕೇಳಿದ್ದನ್ನು ನನ್ನಅರಿವಿನ ವ್ಯಾಪ್ತಿಯಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಪ್ರತಿ ಮನುಷ್ಯನಲ್ಲಿ ನೈತಿಕ ಮೌಲ್ಯಗಳು ಮೂಡಬೇಕು ಎನ್ನುವುದೇ ನನ್ನ ಬರವಣಿಗೆಯ ಆಶಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮತಿ ಅನುಪಮ ಡಾ.ವಿರುಪಾಕ್ಷಪ್ಪ ದಂಪತಿಗೆ ಶಿವಾನಂದ ತಗಡೂರು ಕುಟುಂಬದವರಿಂದ ಸನ್ಮಾನ ಮಾಡಲಾಯಿತು.

ಜಾನಪದ ತಜ್ಞ ಡಾ. ಬಸವರಾಜ ನೆಲ್ಲಿಸರ ಕವನ ಸಂಕಲನ ಕುರಿತು ಮಾತನಾಡಿ, ಜಾನಪದ ಸಿರಿಯಜ್ಜಿ, ಚನ್ನವೀರ ಕಣವಿ ಇವರ ಸಾಲುಗಳನ್ನು ನೆನೆಯುತ್ತಾ ‘ಭಾವಗಳ ಬಿಂಬ’ದಲ್ಲಿ ಇವು ಹೇಗೆ ಪ್ರಕಟಗೊಂಡಿವೆ ಎಂಬುದನ್ನು ವಿಶ್ಲೇಷಿಸಿದರು.  ಮನಸಿನ ತಾಕಲಾಟ,  ಸಂಕಟ, ಸುಂದರ ಭಾವನೆಗಳು, ಆತ್ಮ ವಿಡಂಬನೆಗಳು  ರೂಪಕವಾಗಿ, ಶೋಷಿತ ಮಹಿಳೆಯರ ದನಿಯಾಗಿ ಕವಿತೆಗಳಲ್ಲಿ ಕಾಣಸಿಗುವುದಾಗಿ ಹೇಳಿದರು.

 ಹಿರಿಯ ಪತ್ರಕರ್ತರಾದ ಬಿ.ಎನ್. ಮಲ್ಲೇಶ್‍ ರವರು ಮಾತನಾಡಿ, ಭಾಷೆಗೆ ಭಾವದ ಸ್ಪರ್ಷ ಆದಾಗ ಮಾತ್ರ ಕವಿತೆಯಾಗಲು ಸಾಧ್ಯ. ಅಂತಹ ಕವಿತೆಗಳು ಈ ಕವನ ಸಂಕಲನದಲ್ಲಿ ರೂಪುತಳೆದಿವೆ ಎಂದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ್‍ ಬಡಿದಾಳ್‍ ಮಾತನಾಡಿ, ಲೇಖಕಿಗೆ ಶುಭ ಹಾರೈಸಿದರು.

ದಾವಣಗೆರೆ ವಿ.ವಿ.ಯ ಅಶೋಕ್ ಕುಮಾರ್ ಪಾಳೇದ್‍ ಪ್ರಾಸ್ತವಿಕ ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ವಾಮದೇವಪ್ಪ ವಹಿಸಿದ್ದರು.

ಡಾ. ವಿರುಪಾಕ್ಷಪ್ಪ ಸ್ವಾಗತಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ನಿರೂಪಿಸಿದರು. ವೇದಿಕೆಯಲ್ಲಿ ಪತ್ರಕರ್ತ ಜಿಗಳಿ ಪ್ರಕಾಶ್‍ ಇತರರು ಉಪಸ್ಥಿತರಿದ್ದರು.  ಕುಮಾರಿ ಸಂಹಿತ ಪ್ರಾರ್ಥಿಸಿದರು.

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಕ್ಕೊತ್ತಾಯ:

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜನೆಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಇವರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಹಕ್ಕೋತ್ತಾಯವನ್ನು ಸಲ್ಲಿಸಲಾಯಿತು.

By admin

Leave a Reply

Your email address will not be published. Required fields are marked *

error: Content is protected !!