ಸುದ್ದಿ360 ದಾವಣಗೆರೆ (davangere) , ಅ.04: ತನಗೆ ತಾನೇ ಬೆಳಕಾದ ಬುದ್ಧ ಏಷ್ಯಾದ ಬೆಳಕು ಎಂದೇ ಕರೆಸಿಕೊಂಡವನು. ಆದರೆ ಸಿದ್ಧಾರ್ಥ ಬುದ್ಧನಾದ ದೇಶ ಭಾರತದಲ್ಲಿಯೇ ಬುದ್ಧನ ಅಸ್ತಿತ್ವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಗಳು ಸತೀಶ್ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಬುಧವಾರ ಸಂಜೆ ನಗರದ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ “ಕಲೆಗಳ ಕಲರವ” ಸಮಾರೋಪ ಹಾಗೂ”ಬುದ್ಧನ ಬೆಳಕು” ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಕಲೆಯ ಮೂಲಕ ಕ್ರಾಂತಿಯನ್ನು ಮಾಡುವ ನಿಟ್ಟಿನಲ್ಲಿ ಫೌಂಡೇಶನ್ ಮಾಡುತ್ತಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಕ್ರಾಂತಿಯ ಬದುಕಿನಲ್ಲಿ ಬದ್ಧತೆಯೂ ಮುಖ್ಯವಾಗುತ್ತೆ ಎಂಬ ಕಿವಿಮಾತನ್ನೂ ಹೇಳಿದರು.
ಸಾರ್ವಜನಿಕವಾಗಿ ಮೆಚ್ಚುಗೆಯ ಮಾತನಾಡುವ, ಭರವಸೆಗಳನ್ನು ನೀಡುವ ರಾಜಕಾರಣಿಗಳಿಗೆ, ಸಾಹಿತಿಗಳಿಗೆ, ಸ್ವಾಮೀಜಿಗಳಿಗೆ ಏನೂ ಕೊರತೆ ಇಲ್ಲ. ಆದರೆ ನುಡಿದಂತೆ ನಡೆದವರು ವಿರಳ. ಆಡಿದ ಮಾತುಗಳನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳುವುದು ಮುಖ್ಯ ಎಂಬ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದರು.
ಹಿರಿಯ ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಡೋಲಕ್ ನುಡಿಸುವ ಮೂಲಕ ಉದ್ಘಾಟನೆ ಮಾಡಿ, ಆಯೋಜಕರು ಮತ್ತು ಕಲಾವಿದರಿಗೆ ಶುಭ ಹಾರೈಸಿದರು.
ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಸತೀಶ್ ಜಾರಕಿಹೊಳಿಯವರು ಕ್ರಾಂತಿಕಾರರು. ಅವರು ಸ್ಮಾಶನವೊಂದರಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಭೂಮಿಯ ಮೇಲಿನ ಎಲ್ಲ ಜಾಗವೂ ಶ್ರೇಷ್ಠ. ಯಾವುದೂ ಕನಿಷ್ಠವಲ್ಲ ಎಂದು ಪ್ರತಿಪಾದಿಸಿದವರು. ಎಲ್ಲರೂ ನಾವು ಬೇರೆ ಬೇರೆ ಎಂಬ ಮನೋಭಾವನೆಯಿಂದ ಸಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಒಂದು ಅನ್ವೇಷಣಾ ನಾಟಕವನ್ನು ಹೊರತರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪತ್ರಕರ್ತರಾದ ಬಿ.ಎನ್. ಮಲ್ಲೇಶ್ ಅವರು ಮಾತನಾಡಿ, ಬುದ್ಧನನ್ನು ಓದುವ ಮೂಲಕ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಬುದ್ಧನನ್ನು ಅಪ್ಪಿಕೊಂಡರೆ ರಾಜಕೀಯ, ಧರ್ಮ, ಜಾತಿ ಸಮಸ್ಯೆಗಳು ತನಗೆತಾನೇ ನಿವಾರಣೆಯಾಗುತ್ತವೆ. ಎಲ್ಲರೂ ರಸ್ತೆ ಮೇಲಿನ ಕಸವನ್ನು ಹೊಡೆಯುತ್ತಿದ್ದೇವೆಯೇ ವಿನಃ ಮನಸಿನ ಕಸವನ್ನು ಹೊಡೆಯುತ್ತಿಲ್ಲ. ಶಾಂತಿ ಒಂದೇ ಎಲ್ಲದಕ್ಕೂ ಪರಿಹಾರ ನೀಡಬಲ್ಲುದು ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಒಂದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವಂತಹ ಶಕ್ತಿ ಸಾಹಿತ್ಯ ಮತ್ತು ಕಲೆಗೆ ಇದೆ. ಈ ನಾಟಕ ರಾಜ್ಯದಲ್ಲಿ ಮೊದಲ ಪ್ರಯೋಗವಾಗಿರುವುದಾಗಿ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರೇಕ್ಷಕನ ಚಿತ್ತವನ್ನು ಹಿಡಿದಿಟ್ಟ ‘ಬುದ್ಧನ ಬೆಳಕು’
ನರೇಶ್ ಡಿಂಗ್ರಿ ನಿರ್ದೇಶನದಲ್ಲಿ ಮೂಡಿ ಬಂದ “ಬುದ್ಧನ ಬೆಳಕು” ನಾಟಕ ನೋಡುಗರನ್ನು ಆರಂಭದಿಂದ ಕೊನೆಯವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಬೆಳಕು, ರಂಗ ವಿನ್ಯಾಸ ನಾಟಕದ ಸನ್ನಿವೇಶಗಳನ್ನು ಕಣ್ಣಿಗೆಕಟ್ಟುವಂತೆ ಮೂಡಿಸಿದ್ದು ನಾಟಕದ ಯಶಸ್ಸಿಗೆ ಕಾರಣವಾಯಿತು. ಮುಖ್ಯವಾಗಿ ನಾಟಕದುದ್ದಕ್ಕೂ ಗೀತ ಗಾಯನ ಮತ್ತು ಹಿನ್ನೆಲೆ ಸಂಗೀತವನ್ನು ನಾಟಕದ ನಿರ್ದೇಶಕ ನರೇಶ್ ಡಿಂಗ್ರಿ ಅತ್ಯುತ್ತಮವಾಗಿ ನಿರ್ವಹಿಸಿದರು. ಒಟ್ಟಾರೆ ಸೀಮಿತ ಅವಧಿಯಲ್ಲಿ ಬುದ್ಧನ ಬೆಳಕನ್ನು ಕಟ್ಟಿಕೊಟ್ಟ ನಾಟಕದ ತಂಡದ ಯಶಸ್ಸಿನ ಬಿಂಬ ನಾಟಕ ನೋಡಿ ಬಂದ ಪ್ರೇಕ್ಷಕನಲ್ಲಿ ಕಾಣುತ್ತಿತ್ತು.