‘ಕುಟುಂಬದ ನಡೆ – ಆರೋಗ್ಯದೆಡೆ’  ಕಿಟ್ಟಿಗಳಲ್ಲಿ ಆರೋಗ್ಯದ ಅರಿವು ಮೂಡಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್

ss care trust-dr prabha mallikarjun-davangere

ಸುದ್ದಿ360 ದಾವಣಗೆರೆ, (DAVANGERE) ಅ.03: ತನ್ನ ಇಡೀ ಕುಟುಂಬದ ಆರೋಗ್ಯ ಕಾಳಜಿ  ವಹಿಸುವ ಮಹಿಳೆ ತಮ್ಮ ಆರೋಗ್ಯದ ಬಗ್ಗೆಯೂ ಸಹ ಸದಾ ಎಚ್ಚರ ವಹಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ತಮ್ಮ ಆರೋಗ್ಯದಲ್ಲಾಗುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರಬೇಕು. ಏನೇ ಸಂಶಯ ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು ಎಂದು ಎಸ್.ಎಸ್. ಕೇರ್ ಟ್ರಸ್ಟ್ನ (S.S. CARE TRUST) ಆಜೀವ ವಿಶ್ವಸ್ಥರಾದ ಡಾ. ಪ್ರಭಾ ಮಲ್ಲಿಕಾರ್ಜುನ್ (Dr. Prabha Mallikarjun) ಹೇಳಿದರು.

ನಗರದ ಆಂಜನೇಯ ಬಡಾವಣೆ ಉದ್ಯಾನವನದಲ್ಲಿ ಮಂಗಳವಾರ ಆಂಜನೇಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ, ಎಸ್.ಎಸ್. ಕೇರ್ ಸಹಕಾರದೊಂದಿಗೆ ಆಯೋಜಿಸಿದ್ದ ಮಹಿಳೆಯ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ,  ಮನೆಯಲ್ಲಿ ಯಾರೊಬ್ಬರಿಗೆ ಅನಾರೋಗ್ಯ ಎದುರಾದರೂ ಮಹಿಳೆ ಅವರನ್ನು ನೋಡಿಕೊಳ್ಳುತ್ತಾಳೆ.  ಆದರೆ ಮಹಿಳೆಯೇ ಅನಾರೋಗ್ಯಕ್ಕೆ ತುತ್ತಾದರೆ ಇಡೀ ಕುಟುಂಬವೇ ಸಮಸ್ಯೆ ಎದುರಿಸುವಂತಾಗುತ್ತದೆ. ಕುಟುಂಬದ ಇತರೆ ಸದಸ್ಯರು ಸಹ ಮನೆ ಯಜಮಾನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆ ಮೂಲಕ ಇಡೀ ಕುಟುಂಬದ ನಡೆ ಆರೋಗ್ಯದ ಕಡೆ (family walk towards health) ಇರಬೇಕು ಎಂದು ಹೇಳಿದರು.

ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮಾತನಾಡಿ, ಮಹಿಳೆಯರು  ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಕುಟುಂಬ ಸದಸ್ಯರ ಎದುರು ಮುಕ್ತವಾಗಿ ಮಾತನಾಡುವುದಿಲ್ಲ. ಇದರಿಂದ ಖಾಯಿಲೆ ಉಲ್ಬಣವಾಗಿ ಸ್ವತಃ ನೋವು ಅನುಭವಿಸುವುದು ಒಂದೆಡೆಯಾದರೆ, ಖಾಯಿಲೆ ಹೆಚ್ಚಾದಂತೆ ಚಿಕಿತ್ಸೆ ವೆಚ್ಚ ಕೂಡ ವೃದ್ಧಿಸಿ ಕುಟುಂಬದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ ಎಂದು ಹೇಳಿದರು.

ಸಮಿತಿ ಅಧ್ಯಕ್ಷೆ ಕುಸುಮಾ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಆಸ್ಪತ್ರೆ ವೈದ್ಯರಾದ ಡಾ. ಧನಂಜಯ್, ಡಾ. ಅನುರೂಪಾ, ಡಾ. ಶಾಲಿನಿ, ಡಾ. ವಿದ್ಯಾ, ಸಮಿತಿ ಕಾರ್ಯದರ್ಶಿ ಕೆ.ಆರ್. ವಸಂತ, ಅನಿಲ್‌ಗೌಡ ಇತರರು ಇದ್ದರು.

ಕಿಟ್ಟಿಗಳಲ್ಲಿ ಆರೋಗ್ಯದ ಅರಿವು ಹಂಚಿಕೊಳ್ಳಿ

ಕ್ಯಾನ್ಸರ್ ಲಕ್ಷಣಗಳ ಬಗ್ಗೆ ಅರಿವು ಹೊಂದುವ ಜತೆಗೆ ಕಿಟ್ಟಿಗಳಲ್ಲಿ, ತಮ್ಮದೇ ಗುಂಪುಗಳ ನಡುವೆ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಇತರರಿಗೂ ಅರಿವು ಮೂಡಿಸಬೇಕು.

ಇತ್ತೀಚೆಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ (ಸೆರ್ವಿಕ್ಸ್ ಕ್ಯಾನ್ಸರ್) ಹೆಚ್ಚಾಗುತ್ತಿದೆ. ಮೊದಲ ಹಂತದಲ್ಲಿರುವ ಕ್ಯಾನ್ಸರ್ 4 ಅಥವಾ 5ನೇ ಹಂತ ತಲುಪಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಕಾರಣ, ಮಹಿಳೆಯರು ಅದರಲ್ಲೂ ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಇರುವ 35 ವರ್ಷ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು. ಒಂದೊಮ್ಮೆ ಕ್ಯಾನ್ಸರ್ ಅಂಶ ಪತ್ತೆಯಾದರೆ ಬೇರೊಬ್ಬ ವೈದ್ಯರ ಬಳಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿ ದೃಢಪಡಿಸಿಕೊಂಡು ತಜ್ಞ ವೈದ್ಯರಿಂದ ಅಗತ್ಯ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಡಾ. ಪ್ರಭಾ ಸಲಹೆ ನೀಡಿದರು.

admin

admin

Leave a Reply

Your email address will not be published. Required fields are marked *

error: Content is protected !!