ಸುದ್ದಿ360 ಶಿವಮೊಗ್ಗ: ಕ್ರಾಂತಿಗೀತೆ, ಲಾವಣಿಗಳ ಮೂಲಕ ಶೋಷಿತ ಸಮುದಾಯಗಳ ಪ್ರತಿಭಟನೆಯ ಧ್ವನಿಯಾಗಿದ್ದ ಕ್ರಾಂತಿಕಾರಿ ಹಾಡುಗಾರ ಗದ್ದರ್ ಭಾನುವಾರ ಹೈದರಾಬಾದ್‍ನಲ್ಲಿ ವಿಧಿವಶರಾಗಿದ್ದಾರೆ. ಗದ್ದರ್ ಅಭಿಮಾನಿಗಳು ಅಗಲಿದ ಚೇತನಕ್ಕೆ ಗೌರವಪೂರ್ವಕವಾಗಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಆ.9ರ ಬುಧವಾರದಂದು ಸಂಜೆ 5 ಗಂಟೆಗೆ ನಗರದ ಮೀಡಿಯಾಹೌಸ್‍ನಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದ್ದು, ಸಮಾನ ಮನಸ್ಕ ಗೆಳೆಯರು ನುಡಿನಮನ ಸಭೆಗೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8073502892 ಸಂಪರ್ಕಿಸಬಹುದಾಗಿದೆ.
ಅವಿನಾಭಾವ ನಂಟು:
ಗದ್ಧರ್ ಅವರು ತಮ್ಮ ಕ್ರಾಂತಿಕಾರಿ ವಿಶಿಷ್ಠ ಲಾವಣಿಗಳ ಮೂಲಕ ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೇ ಇಡೀ ದೇಶಕ್ಕೆ ಪರಿಚಿತರು. ಶೋಷಿತ ಸಮುದಾಯಗಳ ಪ್ರತಿಭಟನೆಯ ಧ್ವನಿಯಾಗಿದ್ದ ಅವರಿಗೂ ಶಿವಮೊಗ್ಗ ಹೋರಾಟ ನಿರತ ಜನತೆಗು ಗದ್ದರ್ ರ ಅವಿನಾಭಾವ ನಂಟು ಇದೆ. 1996, 1998ರಲ್ಲಿ ಎರಡು ಸಲ ಶಿವಮೊಗ್ಗಕ್ಕೆ ಬಂದು ಕುವೆಂಪು ವಿವಿ, ಭದ್ರಾವತಿ, ಡಿಸಿಸಿ ಬ್ಯಾಂಕ್ ಸಭಾಂಗಣ, ನಗರದ ಸೈನ್ಸ್ ಮೈದಾನದಲ್ಲಿ ಸಾವಿರಾರು ಜನರಿಂದ ಕಿಕ್ಕಿರಿದ ಸಮಾವೇಶದಲ್ಲಿ ಜನನಾಟ್ಯ ಮಂಡಳಿ ತಂಡದ ಮೂಲಕ ಶಿವಮೊಗ್ಗದ ಜನರ ಎದೆಯಲ್ಲಿ ಕ್ರಾಂತಿಗೀತೆ ನೃತ್ಯಗಳ ಮೂಲಕ ಹೋರಾಟದ ಝಲಕ್ ಸೃಷ್ಟಿ ಮಾಡುವ ಜೊತೆಗೆ ರಂಜಿಸಿದ್ದರು.
ಕ್ರಾಂತಿಕಾರಿ ಹಾಡುಗಾರ ಗದ್ದರ್ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಹೈದರಾಬಾದಿನ ಅಪೋಲೊ ಅಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರು ಬಿಟ್ಟಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.