ಸುದ್ದಿ360 ದಾವಣಗೆರೆ ಸೆ.21: ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಇಂದು ರೈತರು ರಸ್ತೆ ತಡೆ ಚಳವಳಿ ನಡೆಸಿದರು.
ಹಳೇ ಕುಂದವಾಡದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಹಳೇ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರು ಜಮಾಯಿಸಿದ ಅಚ್ಚುಕಟ್ಟು ಪ್ರದೇಶದ ರೈತರು, ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗಳಿಗೆ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸಿರುವ ಕಾಡಾ ಕ್ರಮವನ್ನು ಖಂಡಿಸಿ ರಸ್ತೆಗಿಳಿದು ಪ್ರತಿಭಟನಾ ಚಳವಳಿ ನಡೆಸುವ ಮೂಲಕ ಕಾಡಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಕಾಡಾ ಕ್ರಮವನ್ನು ವಿರೋಧಿಸಿ ಮಧ್ಯಾಹ್ನ 12. ರ ವೇಳೆಗೆ ಹೆದ್ದಾರಿಯ ಎರಡೂ ಬದಿಯಲ್ಲೂ ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಲಾಯಿತು.
ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ರೈತರು ಎಕರೆಗೆ 35 ಸಾವಿರದಿಂದ 40 ಸಾವಿರ ಖರ್ಚು ಮಾಡಿ ಭತ್ತದ ನಾಟಿ ಮಾಡಿದ್ದಾರೆ. ಆದರೆ, ಸರಕಾರ ಈಗ ರೈತರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವುದು ನೋಡಿದರೆ, ‘ರೈತರಿಗೆ ಆತ್ಮಹತ್ಯೆ ಗ್ಯಾರಂಟಿ’ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಮೊದಲೇ 100 ದಿವಸ ನೀರು ಬಿಡುವುದಿಲ್ಲ ಎಂದು ಹೇಳಿದ್ದರೆ, ಯಾರೂ ಭತ್ತದ ನಾಟಿ ಮಾಡುತ್ತಿರಲಿಲ್ಲ. ರೈತರ ಮೇಲೆ ಸರಕಾರ ಗದಾಪ್ರಹಾರ ಮಾಡಬಾರದು. ಹಿಂದಿನ ಆದೇಶದಂತೆ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ಬಾಡಾಕ್ರಾಸ್ ಬಳಿ ಚಳವಳಿಗೆ ಮುಂದಾದ ರೈತರು:
ಹೆದ್ದಾರಿ ಬಂದ್‍ನಿಂದಾಗಿ ಹರಿಹರ ಹಾಗೂ ಬಾಡ ಕ್ರಾಸ್ ಬಳಿ ವಾಹನಗಳು ತಿರುವು ಪಡೆದುಕೊಂಡು ಹೋಗಲು ಅನುವು ಮಾಡಿ ಕೊಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು, ಬಾಡ ಕ್ರಾಸ್ ಬಳಿ ಚಳವಳಿ ನಡೆಸಲು ಮುಂದಾಗಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಎಎಸ್ಪಿ ರಾಮಗೊಂಡ ಬಸರಗಿ, ತಹಸೀಲ್ದಾರ್ ಎಂ.ಬಿ.ಅಶ್ವತ್ಥ್ ಅವರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿ, ರೈತರ ಮನವೊಲಿಸಿದರು. ಬಳಿಕ ರೈತರು ರಸ್ತೆ ತಡೆಯನ್ನು ಹಿಂಪಡೆದರು.
ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಕನಕಪುರದ ಬಂಡೆ ಇವರಿಗೆ ಕಲ್ಲು ಗಣಿಗಾರಿಕೆ ಬಿಟ್ಟರೆ ಬೇರೇನೂ ಗೊತ್ತಿರುವಂತೆ ಕಾಣಿಸುತ್ತಿಲ್ಲ. ಸಚಿವ ಮಧು ಬಂಗಾರಪ್ಪ ಸಿನಿಮಾ ನಟ, ಇನ್ನೂ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಗಣಿ, ಭೂವಿಜ್ಞಾನ ಖಾತೆ ನೀಡಿದ್ದು, ಗಣಿಧಣಿಗಳಾಗಿದ್ದಾರೆ. ಇವರಾರಿಗೂ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ಕೂಡಲೇ ನಾಲೆಯಲ್ಲಿ ನೀರು ಹರಿಸುವಿಕೆಯನ್ನು ಹಿಂದಿನ ಆದೇಶದಂತೆ ಮುಂದುವರೆಸಬೇಕು ಎಂಬುದಾಗಿ ಆಗ್ರಹಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ನಾಗೇಶ್ವರರಾವ್ ಮಾತನಾಡಿ, “ನೀರು ಯಾರೊಬ್ಬರ ಸ್ವತ್ತಲ್ಲ. ಸರಕಾರ ನಮಗೆ 100 ದಿವಸ ನೀರು ಹರಿಸುವ ಗ್ಯಾರಂಟಿ ನೀಡಬೇಕು ಈ ಕುರಿತು ಕೂಡಲೇ ನೀರು ಬಿಡುವ ಆದೇಶದ ಪ್ರತಿಯನ್ನು ನೀಡಬೇಕು. ಇಲ್ಲದಿದ್ದರೆ 91-92ರ ಘಟನೆ ಮರುಕಳಿಸಲಿದೆ” ಎಂದು ಎಚ್ಚರಿಸಿದರು.
ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ್ ಮಾತನಾಡಿ, ರೈತರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದಂತಾಗಿದೆ. ರೈತರು ಹೇಗೋ ಬದುಕಬಹುದು. ನೀರು ಹರಿಸದಿದ್ದರೆ ಜಾನುವಾರುಗಳಿಗೆ ಮೇವು ಇಲ್ಲದಂತಾಗಿ ಅವುಗಳು ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ನಮ್ಮದು ಪಕ್ಷಾತೀತವಾದ ಹೋರಾಟವಾಗಿದೆ ತಕ್ಷಣವೇ ಮೊದಲಿನ ಆದೇಶದಂತೆ ನೀರು ಹರಿಸಬೇಕು” ಎಂದು ಆಗ್ರಹಿಸಿದರು.
ಹೆದ್ದಾರಿ ತಡೆಯಲ್ಲಿ ಮಾಜಿ ಮೇಯರ್ ಎಚ್. ಎನ್. ಗುರುನಾಥ್, ಮುಖಂಡರಾದ ಶಾಮನೂರು ಕಲ್ಲೇಶಪ್ಪ, ಪುರಂದರ ಲೋಕಿಕೆರೆ, ಕೋಲ್ಕುಂಟೆ ಬಸವರಾಜ್, ಸದಾನಂದ್, ರಾಜಪ್ಪ, ರೈತ ಮುಖಂಡ ಕುಂದುವಾಡದ ಗಣೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ನಾಗೇಶ್ವರರಾವ್, ಮತ್ತಿ ಜಯಣ್ಣ, ಕಲ್ಲಬಂಡೆ ಕಿಶೋರ್, ಕುಂದುವಾಡ ಜಿಮ್ಮಿ ಹನುಮಂತಪ್ಪ, ಕಲ್ಪನಹಳ್ಳಿ ಉಜ್ಜಣ್ಣ, ಆರನೇ ಕಲ್ಲು ವಿಜಯ್ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಭಾಗವಹಿಸಿದ್ದರು.