ಶಿವಮೊಗ್ಗ ,ಫೆ.08 :  ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಜಿಲ್ಲೆಯ ಹೊಸನಗರ ಮೂಲದ ಮಂಜುನಾಥ್(36 ) ಭಾರತೀಯ ವಾಯುಸೇವೆಯ ತರಬೇತುದಾರ ನೆಲೆಕ್ಕೆ ಅಪ್ಪಳಿಸಿ ಸ್ಥಳದಲ್ಲೆ ಸಾವಿಗೀಡಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರ ವಾಯುಸೇನ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮೃತರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಜಿ.ಎಸ್ ಮಂಜುನಾಥ್ (36 ) ಬಿನ್ ಜಿ.ಎಂ. ಸುರೇಶ್ ಎಂದು ತಿಳಿದುಬಂದಿದೆ.
ಮೃತರು, 2023 ರಲ್ಲಿ ಭಾರತೀಯ ವಾಯುಸೇನೆಗೆ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಸೇವೆಗೆ ಸೇರ್ಪಡೆಗೊಂಡಿದ್ದು, ನಂತರ, ಜಮ್ಮು-ಕಾಶ್ಮೀರ್, ಅಸ್ಸಾಂ, ಗಾಜೀಯಬಾದ್, ದೆಹಲಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕಳೆದ ಒಂದುವರೆ ತಿಂಗಳಿನಿಂದ ಉತ್ತರ ಪ್ರದೇಶದ ಆಗ್ರದ ಭಾರತೀಯ ವಾಯುಸೇನೆಯ ಪ್ಯಾರ ಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರತರಾಗಿದ್ದರು.

ಮೂಲತಃ ಕೃಷಿ ಕುಟುಂಬಕ್ಕೆ ಸೇರಿದ ಮಂಜುನಾಥ್ ಇವರು 2019 ರಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಸಂತಾನದ ನಿರೀಕ್ಷೆಯಲ್ಲಿದ್ದರು. ಒಟ್ಟಾರೆ 16 ವರ್ಷಗಳ ಕಾಲ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೃತರು, ಇದೇ ಫೆಬ್ರವರಿ 7 ರ ಶುಕ್ರವಾರ ಬೆಳಗ್ಗೆ ಸರಿ ಸುಮಾರು 7 ರಿಂದ 8 ಗಂಟೆಯ ವೇಳೆಯಲ್ಲಿ ಆಗ್ರ ವಾಯುಸೇನೆ ಪಿಟಿಎಸ್ ಕೇಂದ್ರದಲ್ಲಿ ಮಂಜುನಾಥ ಅವರನ್ನು ಒಳಗೊಂಡಂತೆ ಸುಮಾರು 12 ಜನರ ತಂಡಕ್ಕೆ ಕಾರ್ಗೋ ಮಾದರಿ ವಿಮಾನದಿಂದ ಸುಮಾರು 18 ಸಾವಿರ ಅಡಿ ಎತ್ತರದಿಂದ ಪ್ಯಾರ ಜೆಂಪ್ ತರಬೇತಿ ನೀಡುವ ಸಮಯದಲ್ಲಿ, ಎಲ್ಲಾ 11 ಮಂದಿ ಶಿಬಿರಾರ್ಥಿಗಳು ಸುರಕ್ಷಿತವಾಗಿ ಜಂಪ್ ಪೂರೈಸಿದ್ದು, ಕೊನೆಯವರಾಗಿ ಮಂಜುನಾಥ್ ಜಿಗಿದಿದ್ದು, ಅವರ ಪ್ಯಾರಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ತರಬೇತುದಾರ ಮಂಜುನಾಥ್ ಕೊನೆಯುಸಿರು ಕಂಡಿದ್ದಾರೆ.

ಗ್ರಾಮದಲ್ಲಿ ಮಡುಗಟ್ಚಿದ ಶೋಕ :
ವಿಷಯದ ತಿಳಿಯುತ್ತಿದ್ದಂತೆ ಮೃತರ ಗ್ರಾಮದಲ್ಲಿ ಅತೀವ ಶೋಕ ಮನೆ ಮಾಡಿದ್ದು, ಸಂಬಂಧಿಕರು, ಹಿತೈಷಿಗಳಿಂದ ನೊಂದ ಕುಟುಂಬಕ್ಕೆ ಸಂತಾಪ ಸೂಚನೆ ಕಾರ್ಯ ನಡೆದಿದೆ. ನಾಳೆ ೯ರ ಭಾನುವಾರ ಬೆಳಗ್ಗೆ ಸೇನಾನಿಯ ಮೃತದೇಹ ಪಟ್ಟಣ ತಲುಪುವ ನಿರೀಕ್ಷೆಯಿದ್ದು, ತಾಲೂಕು ಆಡಳಿತ ಸಕಲ ಸರ್ಕಾರಿ ಗೌರವ ನೀಡಲು ಸರ್ವ ತಯಾರಿಗೆ ಮುಂದಾಗಿದೆ.ಹೊಸನಗರದ ಕ್ರೀಡಾಂಗಣದಲ್ಲಿ ಶಾಸಕ ಗೋಪಾಲಕೃಷ್ಣ ಸಮ್ಮುಖದಲ್ಲಿ ತಹಶೀಲ್ದಾರ್ ರಶ್ಮಿ ಹೆಚ್. ನೇತೃತ್ವದಲ್ಲಿ ಸರ್ಕಾರಿ ಗೌರವ ನೀಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎಂದು ಮೃತನ ಕುಟುಂಬ ಮೂಲಗಳು ತಿಳಿಸಿವೆ.

ಮೃತ ಮಂಜುನಾಥ್ ಅವರ ನಿಧನಕ್ಕೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!