ಸುದ್ದಿ360, ದಾವಣಗೆರೆ (Davangere) ಸೆ.9: ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್ ಆರ್‍ಟಿಸಿ (KSRTC) ಬಸ್ ನಿಲ್ದಾಣಕ್ಕೆ ಶ್ರಮಜೀವಿ ಕಾಂ. ಪಂಪಾಪತಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ಆಗ್ರಹಿಸಿದೆ.
ಈ ಕುರಿತು ಇಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜನಶಕ್ತಿ ಸಂಘನಟೆಯ ಸತೀಶ್ ಅರವಿಂದ್ ಮಾತನಾಡಿ, ದಾವಣಗೆರೆ ನಗರ ಅಭಿವೃದ್ಧಿ ಹೊಂದಲು ಶ್ರಮಿಸಿದ ನಾಯಕರಲ್ಲಿ ಶ್ರಮಜೀವಿ ಕಾಂ.ಪಂಪಾಪತಿಯವರು (Pampapathi) ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಕಾಟನ್‍ಮಿಲ್‍ನಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿಕೊಂಡು ದುಡಿದ ಅವರು ನಂತರದ ದಿನಗಳಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಮಾಲೀಕ ವರ್ಗ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ನಾಲ್ಕು ವರ್ಷಗಳ ಕಾಲ ನಗರಸಭೆ ಅಧ್ಯಕ್ಷರಾಗಿ ಉತ್ತಮ ಜನಸ್ನೇಹಿ ಆಡಳಿತ ನೀಡುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಜೆಸಿಟಿಯು ಜಿಲ್ಲಾ ಸಮಿತಿಯ ಹೆಚ್.ಜಿ. ಉಮೇಶ್ ಮತನಾಡಿ, ಕಾಂ.ಪಂಪಾಪತಿಯವರು ದಾವಣಗೆರೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮತ್ತು ಡಿಪೋ ಸ್ಥಾಪನೆಗಾಗಿ ಈಗಿನ ಮಹಾನಗರ ಪಾಲಿಕೆ ಬಳಿಯ ಗಾಂಧೀಜಿ ಪ್ರತಿಮೆ ಎದುರು ಸತತ ಐದು ದಿನಗಳ ಕಾಲ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಅಗತ್ಯ ಅನುದಾನ ತಂದು ಯಶಸ್ವಿಯಾದವರಾಗಿದ್ದಾರೆ. ನಗರದಲ್ಲಿ 11 ಹೊಸ ಬಡಾವಣೆಯನ್ನು ನಿರ್ಮಾಣ ಮಾಡುವುದರ ಜೊತೆಗೆ 18 ಸಾವಿರ ನಿರಾಶ್ರತರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಸೂರು ಮಾಡಿಕೊಟ್ಟಂತವರಾಗಿದ್ದಾರೆ. ಹೀಗೆ ಹತ್ತು ಹಲವು ಯೋಜನೆಗಳನ್ನು ನಗರಕ್ಕೆ ನೀಡಿರುವ ಅವರು ನಗರದ ಜನತೆಗೆ ಶುದ್ಧ ಕುರಿಯುವ ನೀರು, ಒಳಚರಂಡಿ ನಿರ್ಮಾಣದ ವ್ಯವಸ್ಥೆಯನ್ನು ಕಲ್ಪಿಸಿದವರಾಗಿದ್ದು, ನೂತನ ಬಸ್ ನಿಲ್ದಾಣಕ್ಕೆ ಪಂಪಾಪತಿಯವರ ಹೆಸರಿಡುವುದು ಸೂಕ್ತ ಎಂದರು.
ದಾವಣಗೆರೆ ನಗರ ಅಭಿವೃದ್ಧಿಗೆ ಕಾಂ.ಪಂಪಾಪತಿಯವರ ಕೊಡುಗೆ ಅಪಾರವಾಗಿದ್ದು, ಈವರೆಗೆ ಒಂದೇ ಒಂದು ‘ಪಂಪಾಪತಿ ಭವನ’ವಾದರೂ ನಿರ್ಮಿಸಿ ಅವರಿಗೆ ಗೌರವ ಸೂಚಿಸದಿರುವುದು ವಿಷಾದನೀಯ ಸಂಗತಿಯಾಗಿದೆ. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಕಾಂ.ಪಂಪಾಪತಿಯವರ ಹೆಸರು ನಾಮಕರಣ ಮಾಡಬೇಕು. ಈ ನಿಟ್ಟಿನಲ್ಲಿ ಎರಡನೇ ಹಂತವಾಗಿ ಸಾರ್ವಜನಿಕರ ಸಹಿ ಸಂಗ್ರಹಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಮೂರನೇ ಹಂತವಾಗಿ ಮುಖ್ಯಮಂತ್ರಿಗಳಿಗೆ ಸಾರಿಗೆ ಸಚವರಿಗೆ ಮತ್ತು ಜಿಲ್ಲಾ ಮಂತ್ರಿಗಳಿಗೆ ನಿಯೋಗ ಹೋಗುವುದು. ಹಾಗೂ ನಾಲ್ಕನೇ ಹಂತವಾಗಿ ದೊಡ್ಡಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಆಗ್ರಹಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಸಿಟಿಯು ಜಿಲ್ಲಾ ಸಮಿತಿಯ ಮಹಮದ್ ರಫೀಕ್, ಆನಂದರಾಜು ಕೆ.ಹೆಚ್., ನರೇಗಾ ರಂಗನಾಥ್, ಎಸ್. ರಾಜೇಂದ್ರ ಬಂಗೇರ ಇದ್ದರು.