ದಾವಣಗೆರೆ: ಮತ್ತೊಮ್ಮೆ ಜಿಎಂ ಸಿದ್ದೇಶ್ವರ್ ‘ನಮ್ಮಭಿಮಾನ’ದಲ್ಲಿ ಪ್ರತಿಧ್ವನಿಸಿದ ಆಶಯ

suddi360

ಸುದ್ದಿ360 ದಾವಣಗೆರೆ: ಇದ್ದದ್ದನ್ನು ಇರುವ ಹಾಗೆಯೇ ಹೇಳುವ ಸರಳ ಮತ್ತು ಸಜ್ಜನ ವ್ಯಕ್ತಿತ್ವದ ರಾಜಕರಣಿ ಸಂಸದ ಜಿಎಂ. ಸಿದ್ದೇಶ್ವರ್ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಡಾ.ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಗರದ ಪಿಬಿ ರಸ್ತೆಯ ಅರುಣ ಟಾಕೀಸ್ ಎದರುಗಡೆ ಇರುವ ಹೊಳೆ ಹೊನ್ನೂರು ತೋಟದ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಂಸದ ಡಾ.ಜಿ. ಎಂ. ಸಿದ್ದೇಶ್ವರ ಅವರ 71ನೇ ಜನ್ಮ ದಿನಾಚರಣೆಯ `ನಮ್ಮಭಿಮಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಾಲ್ಕು ಬಾರಿ ಮಣಿಸಿ, ದಾವಣಗೆರೆ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯನ್ನಾಗಿಸುವಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪಾಲು ಇದೆ. ಪಕ್ಷನಿಷ್ಟರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 20 ವರ್ಷಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾಗಿ ಜನರ ಸೇವೆ ಮಾಡುತ್ತಿದ್ದಾರೆ. ಸಿದ್ದೇಶ್ವರ ಹೋಗದ ಹಳ್ಳಿಗಳಿಲ್ಲ. ಎಲ್ಲ ಹಳ್ಳಿಗಳಿಗೂ ಹೋಗಿ ಜನರೆ ಸೇವೆ ಮಾಡುತ್ತಿದ್ದಾರೆ ಎಂದರು.

ದಾವಣಗೆರೆ ಸ್ಮಾರ್ಟ್‍ ಸಿಟಿಗೆ ಸಿದ್ದೇಶ್ವರ ಪಾತ್ರ ಪ್ರಮುಖ

ನಾನು ಸಿಎಂ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಕೆಲಸಗಳನ್ನು ಮಾಡಿಸಿಕೊಂಡು ಬಂದಿದ್ದಾರೆ. ದಾವಣಗೆರೆ ಸ್ಮಾರ್ಟ್ಸಿಟಿಗೆ ಆಯ್ಕೆ ಆದುದರಲ್ಲಿ ಸಿದ್ದೇಶ್ವರ ಅವರ ಪಾತ್ರ ಸಾಕಷ್ಟಿದೆ. ಅವರ ಪ್ರಯತ್ನದ ಫಲವಾಗಿ ಜಿಲ್ಲೆ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದೇಶ್ವರ ಅವರು ಜನಪರ ಸಂಸದರಾಗಿದ್ದು, ವಾರಕೊಮ್ಮೆ ಸಂಸದರ ಕಚೇರಿಯಲ್ಲಿ ಸಿಗುವ ಎಂಪಿಯಾಗಿದ್ದಾರೆ. ನೀರಾವರಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ ಎಂದರು.

ಸಿದ್ದೇಶ್ವರರ ಯಶಸ್ಸಿನ ಹಿಂದೆ ಅವರ ಧರ್ಮಪತ್ನಿ ಗಾಯತ್ರಿ ಮತ್ತು ಕುಟುಂಬದ ಸದಸ್ಯರ ಪಾತ್ರವೂ ಮಹತ್ವದ್ದಾಗಿದೆ ಎಂದರು. ಸಿದ್ದೇಶ್ವರ ಅವರು ಸಾರ್ವಜನಿಕ ಜೀವನದಲ್ಲಿ ನೂರು ಕಾಲ ಇರಬೇಕು. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂಬ ಆಶಯ ವ್ಯಕ್ತಪಡಿಸಿದರು.

71ರ ಇಳಿವಯಸ್ಸಿನಲ್ಲೂ 17 ವರ್ಷದ ಯುವಕನಂತೆ ಕೆಲಸ ಮಾಡುತ್ತಿರುವ ಸಿದ್ದೇಶ್ವರ್ ಅವರ ಸೇವೆ ಮತ್ತೊಮ್ಮೆ ಜಿಲ್ಲೆಗೆ ಸಿಗಲಿ.

-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಬಡವರು, ರೈತರ ಪರವಾಗಿ ಜೀವನವನ್ನೇ ಮುಡುಪಾಗಿಟ್ಟಿರುವ ಸಿದ್ದೇಶ್ವರ ಅವರು ಸಂಸದರಾಗಿ ಜನ ಸೇವೆ ಮಾಡುತ್ತಿದ್ದಾರೆ. ಇನ್ನೊಮ್ಮೆ ಅವರಿಗೆ ನಿಮ್ಮ ಆಶೀರ್ವಾದ ಸಿಕ್ಕರೆ ಸಮಾಜ ಸೇವೆ ಮಾಡಲು ಅವರಿಗೆ ಹೆಚ್ಚು ಸ್ಪೂರ್ತಿ ಸಿಗಲಿದೆ” ಎಂದರು.

-ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ.

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ದೇವರು ಸಿದ್ದೇಶ್ವರರಿಗೆ ಆಯುಷ್ಯ, ಆರೋಗ್ಯ ಕೊಟ್ಟು ಇನ್ನು ಹೆಚ್ಚಿನ ಸೇವೆ ಮಾಡುವ ಶಕ್ತಿ ಕರುಣಿಸಲಿ. ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಹೆಗಲಿಗೆ, ಹೆಗಲು ಕೊಟ್ಟು ಅವರು ದುಡಿಯಲಿ” ಎಂದು ಶುಭ ಹಾರೈಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ರು ಪಕ್ಷಕ್ಕಾಗಿ ದುಡಿಯುತ್ತೇನೆ. ಟಿಕೆಟ್‍ ನನಗೇ ಸಿಕ್ಕಲ್ಲಿ ಕೊನೆಯ ಬಾರಿ ನಿಮ್ಮ ಸೇವೆ ಮಾಡುವ ಅವಕಾಶಕ್ಕಾಗಿ ನಿಮ್ಮಿಂದ ಆಶೀರ್ವಾದ ಪಡೆದು ನಿಮ್ಮ ಸೇವೆ ಮಾಡುತ್ತೇನೆ.

-ಜಿ.ಎಂ. ಸಿದ್ದೇಶ್ವರ್ ಸಂಸದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹರಿಹರ ಶಾಸಕ ಬಿ.ಪಿ. ಹರೀಶ ಮಾತನಾಡಿದರು. ಜಿಎಂಎಸ್ ಪತ್ನಿ ಗಾಯಿತ್ರಿ ಸಿದ್ದೇಶ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರಾದ ಪ್ರೊ.ಎನ್. ಲಿಂಗಣ್ಣ, ಎಸ್.ವಿ. ರಾಮಚಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ಮುಖಂಡರಾದ ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಎಚ್.ಎಸ್. ಶಿವಕುಮಾರ್, ದೇವರಮನಿ ಶಿವಕುಮಾರ್, ಶಾಂತರಾಜ ಪಾಟೀಲ್, ಮುರುಗೇಶ್ ಆರಾಧ್ಯ, ಯಶೋಧ ಯಗ್ಗಪ್ಪ, ಕುಟುಂಬದ ಸದಸ್ಯರಾದ ಜಿ.ಎಂ. ಲಿಂಗರಾಜ್, ಜಿ.ಎಂ. ಪ್ರಸನ್ನಕುಮಾರ್, ಪುತ್ರ ಜಿ.ಎಸ್. ಅನಿತ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!