ಅಧಿಕಾರಿಗಳ ಆಂಗ್ಲ ದರ್ಬಾರ್ : ‘ಎಚ್ಚೆತ್ತುಕೊಳ್ಳದಿದ್ದರೆ ಕರವೇಯಿಂದ ಘೇರಾವ್‍ ಎಚ್ಚರ’

ಸುದ್ದಿ360 ದಾವಣಗೆರೆ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊನ್ನೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳ ಆಂಗ್ಲ ದರ್ಬಾರ್ ನಿಂದ ಕೂಡಿತ್ತು ಎಂಬುದಾಗಿ ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ಖಂಡಿಸಿದ್ದು, ಮುಂದುವರೆದಲ್ಲಿ ಇಂತಹ ಸಭೆಗಳ ಮೇಲೆ ಕರವೇ ದಾಳಿ ನಡೆಸಿ ಅಧಿಕಾರಿಗಳಿಗೆ ಘೇರಾವ್ ಮಾಡಲಾಗುವುದು ಎಂದು ವೇದಿಕೆ ಜಿಲ್ಲಾಧ್ಯಕ್ಷರಾದ ಎಂ.ಎಸ್.ರಾಮೇಗೌಡ ಎಚ್ಚರಿಸಿದ್ದಾರೆ.

ಸಭೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಭಾಗವಹಿಸಿದ್ದ  ಗುಂಜನ್ ಕೃಷ್ಣರವರು ಜಿಲ್ಲೆಯ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲೆ ಪಡೆದಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಸಹ ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ‘ಇದು ಕನ್ನಡಿಗರ ಸರ್ಕಾರ’ ಎನ್ನುತ್ತಾರೆ. ಆದರೆ ಅಧಿಕಾರಿಗಳು ಮಾತ್ರ ಆಂಗ್ಲ ಭಾಷೆಯ ದರ್ಬಾರ್ ನಡೆಸುತ್ತಾರೆ. ‘ಆಂಗ್ಲ ಭಾಷಾ ರಾಜ್ಯ’ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಬೇರೆ ರಾಜ್ಯಗಳಿಂದ  ಬಂದಂತಹ ಅಧಿಕಾರಿಗಳು ಮೂರು ತಿಂಗಳು ಒಳಗಾಗಿ ಕನ್ನಡ ಕಲಿತು ತಮ್ಮ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಇದನ್ನ ಗಾಳಿಗೆ ತೂರಲಾಗುತ್ತದೆ. ಕನ್ನಡ ಕಲಿಯದೇ ಇರುವುದು  ಇವರಿಗೆ ಕನ್ನಡದ ಮೇಲೆ ಎಷ್ಟರ ಮಟ್ಟಿಗೆ ಪ್ರೇಮ ಇದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಇಂತಹ ಅಧಿಕಾರಿಗಳ ವಿರುದ್ದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಡೆಯುವ ಇಂತಹ ಸಭೆಗಳ ಮೇಲೆ ವೇದಿಕೆ ದಾಳಿ ನಡೆಸಿ ಅಧಿಕಾರಿಗಳಿಗೆ ಘೇರಾವ್ ಮಾಡಲಾಗುವುದೆಂದು ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಎಚ್ಚರಿಸಿದ್ದಾರೆ.   ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳಿಂದಲೂ ನಾಡು, ನುಡಿ, ಭಾಷೆ, ಸಂಸ್ಕೃತಿ, ಕನ್ನಡಿಗರ ಪರ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಇದಕ್ಕೆ ಸ್ಪಂದಿಸಿದ ಸರ್ಕಾರಗಳು ಸಹ ಹಲವು ಬಾರಿ ಕನ್ನಡ ಪರ ನಿಲುವುಗಳನ್ನ ತೆಗೆದುಕೊಂಡಿವೆ.  ಆದರೂ ಕೆಲವು ಕನ್ನಡ ಭಾಷೆ ಬಾರದ ಅಧಿಕಾರಿಗಳು ನಮ್ಮಲ್ಲೇ ಇದ್ದಾರೆ. ಇವರು ಸೇರಿದಂತೆ ಹೊರರಾಜ್ಯದಿಂದ ಬಂದಂತ ಅಧಿಕಾರಿಗಳಿಗೆ ಮುಂದಿನ ದಿನದಲ್ಲಿ ಕರವೆಯಿಂದ ಕನ್ನಡ ಕಲಿಕೆ ಪುಸ್ತಕ ನೀಡಲಾಗುವುದೆಂದು ಕರವೇ ಜಿಲ್ಲಾಧ್ಯಕ್ಷರಾದ ರಾಮೇಗೌಡ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!