ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಉತ್ತರ ಖಂಡಿಸಿ ಬಿಜೆಪಿ ಸಭಾತ್ಯಾಗ

ಆಪರೇಷನ್ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭ: ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ಚರ್ಚಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕ‌ ಉತ್ತರ ನೀಡಿಲ್ಲ ಎಂದು ಖಂಡಿಸಿ, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಬದಲು ಮೂರು ಕೆಜಿ ಅಕ್ಕಿ ಕೊಡುತ್ತಿರುವುದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಕ್ಕೆ ಆಕ್ಷೇಪಿಸಿ ತಿರುಗೇಟು ನೀಡಿ ಬಸವರಾಜ ಬೊಮ್ಮಾಯಿ ಮಾತನಾಡಿ,  ನಾವು ಸೇಡಿನ ರಾಜಕಾರಣ ಮಾಡಿಲ್ಲ. ನಿಮ್ಮ ಕಾಲದಲ್ಲಿ ಆಗಿರುವ ಭ್ರಷ್ಟಾಚಾರಗಳ ತನಿಖೆಯನ್ನು ಲೋಕಾಯುಕ್ತ ಮಾಡುತ್ತಿದೆ. ನಿಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಅಂತ ಅಲ್ಲ. ಆ ಪ್ರಕರಣಗಳು ಈಗಲೂ ಜೀವಂತವಾಗಿವೆ. ತನಿಖೆ ನಡೆಸಿದರೆ ಎಲ್ಲ ಹೊರ ಬರುತ್ತದೆ ಎಂದು ಹೇಳಿದರು.

 ಸಿಎಂ ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಇಲ್ಲಿ ಏನು ಮಾತನಾಡಿದ್ದೇವೆ, ಹೊರಗಡೆ ಅದನ್ನೆ ಜನರು ಮಾತನಾಡುತ್ತಿದ್ದಾರೆ. ಸಿಎಂ ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಅಂತ ನಾವು ಹೇಳಿಲ್ಲ. ಅವರ ಇಲಾಖೆಯಲ್ಲಿ ಆಗಿಲ್ಲ ಅಂತ‌ ಹೇಳುತ್ತಿದ್ದಾರೆ. ಬೇರೆ ಕಡೆ ಆಗಿರಬಹುದು ಎನ್ನುವ ಮಾತು ಆಡುತ್ತಿದ್ದಾರೆ ಎಂದರು.

ನಮ್ಮ ಕಾಲದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರಿ, ನೀವು ತನಿಖೆ ಮಾಡಿ ನಿಮ್ಮ ಬಳಿ ಅಧಿಕಾರ ಇದೆ. ನಾವು ಯಾವುದೆ ತಪ್ಪು ಮಾಡಿಲ್ಲ. ನಮಗೆ ಯಾವುದೇ ಭಯ ಇಲ್ಲ. ನಿಮ್ಮ ಅವಧಿಯಲ್ಲಿ ಆಗಿದ್ದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಅವುಗಳನ್ನು ಸೇರಿಸಿ  ತನಿಖೆ ಮಾಡಿಸಿ ನಾವ್ಯಾರು ಬೇಡ ಅಂತ ಹೇಳಿಲ್ಲ. ನಿಮ್ಮ ಬಳಿ ಅಧಿಕಾರ ಇದೆ. ತನಿಖಾ ಸಂಸ್ಥೆಗಳು ಇವೆ. ನಮ್ಮ ಅವಧಿ ನಿಮ್ಮ ಅವಧಿಯಲ್ಲಾಗಿರುವ ಎಲ್ಲ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ನಮಗೇನು ತೊಂದರೆ ಇಲ್ಲ ಎಂದರು.

ಆಪರೇಷನ್ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭ

ರಾಜ್ಯದಲ್ಲಿ ಆಪರೇಷನ್ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭವಾಗಿದ್ದು, 2007 ರಲ್ಲಿ ನೀವು ಜೆಡಿಎಸ್ ತೊರೆದು ರಾಜಿನಾಮೆ ಕೊಟ್ಟು ಕಾಂಗ್ರೆಸ್ ಸೇರಿ ಚುನಾವಣೆ ಗೆದ್ದು ಬಂದಿದ್ದಿರಿ, ಅದೇ ರೀತಿ ಅವರೂ ಮಾಡಿದ್ದಾರೆ. ಅವರಿಗೂ ನಿಮಗೂ ಏನು ವ್ಯತ್ಯಾಸ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ 80 ರ ನಂತರ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಅಧಿಕಾರಕ್ಕೆ ಬಂದಿಲ್ಲ. ನಿಮ್ಮ ಪರಿಸ್ಥಿತಿಯೂ ಹಾಗೇ ಇದೇ. 2013 ರಲ್ಲಿ ಅಧಿಕಾರ ನಡೆಸಿ ಎಲ್ಲ ಭಾಗ್ಯಗಳನ್ನು ಕೊಟ್ಟರೂ ನೀವು ಯಾಕೆ ಸೋತಿರಿ, ನಿಮ್ಮನ್ನೂ ಜನರು ತಿರಸ್ಕರಿಸಿದ್ದರು‌ ಎಂದರು.

2004 ರಲ್ಲಿ ಕಾಂಗ್ರೆಸ್ 65 ಸೀಟು ಬಂದಿತ್ತು, ಆಗೇನು ಬಹುಮತ‌ ಇತ್ತಾ ಇವರಿಗೆ, 2018 ರಲ್ಲಿ ಇವರಿಗೆ ಬಹುಮತ ಇತ್ತಾ ? ಯಾರಿಗೆ ಬಹುಮತದ ಪಾಠ ಹೇಳಿಕೊಳ್ಳುತ್ತಾರೆ ಇವರು. 1983 ರಲ್ಲೂ ಜನತಾ ಪಕ್ಷಕ್ಕೆ ಬಹುಮತ  ಇರಲಿಲ್ಲ‌ ಆಗಲೂ ಸರ್ಕಾರ ಮಾಡಿದ್ದರು. ಆಗಿನಿಂದಲೂ ಮೈತ್ರಿ ಸರ್ಕಾರ ಆರಂಭವಾಗಿದೆ ಎಂದು ಹೇಳಿದರು.

ಅಕ್ಕಿ ಕಡಿತ ಅನ್ಯಾಯ

ಕೇಂದ್ರ ಸರ್ಕಾರ ಆಹಾರ ಭದ್ರತೆ‌ ಕಾಯ್ದೆ ಪ್ರಕಾರ ಐದು ಕೆಜಿ ಅಕ್ಕಿ ಕೊಟ್ಟಿದ್ದು, ನೀವು ಮೂರು ಕೆಜಿ ಕೊಡುತ್ತಿದ್ದೀರಿ ನಿಮಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.  ಅಕ್ಕಿ ಕೇಳಲ್ಲಿಕ್ಕೆ ಕೇಂದ್ರ ಸರ್ಕಾರದ‌ ಜೊತೆ ಮಾತನಾಡದೇ ಡೆಪ್ಯುಟಿ ಮ್ಯಾನೇಜರ್ ಹತ್ತಿರ ಹೋಗಿ ಕೇಳಿದರೆ ಅವರಿಗೆ ಅಕ್ಕಿ ಕೊಡುವ ಅಧಿಕಾರ ಇದಿಯಾ ? ಎಫ್ ಸಿಐ ಕೇಂದ್ರ ಸರ್ಕಾರದ ಏಜೆನ್ಸಿ, ಐದು ವರ್ಷ ಅಧಿಕಾರ ನಡೆಸಿದ್ದಾರೆ‌ ಯಾರೊಂದಿಗೆ ಮಾತನಾಡಬೇಕು ಅನ್ನುವ ಸಾಮಾನ್ಯ ಜ್ಞಾನ ಇಲ್ಲ ಎಂದು ವಾಗ್ದಾಳಿ ನಡೆಸಿ ಮುಖ್ಯಮಂತ್ರಿಗಳ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

admin

admin

Leave a Reply

Your email address will not be published. Required fields are marked *

error: Content is protected !!