ಹಿರಿಯ ರಾಜಕಾರಣಿ, ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ

ದಾವಣಗೆರೆ: ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ದಾವಣಗೆರೆ ದಣಿ ಎಂದೇ ಕರೆಯಲ್ಪಡುತ್ತಿದ್ದ ಶಾಮನೂರು ಶಿವಶಂಕರಪ್ಪ (95) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರು, ಕುಟುಂಬಸ್ಥರು, ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಶಾಮನೂರು ನಿವಾಸದಲ್ಲಿ ದುಃಖ ಮಡುಗಟ್ಟಿದೆ. ದೀರ್ಘಕಾಲದವರೆಗೆ ಜನಸೇವೆಯಲ್ಲಿದ್ದ ಅವರು, 6 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಶಾಮನೂರು ಶಿವಶಂಕರಪ್ಪ, ಇತ್ತೀಚೆಗೆ 95ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದರು. ಹುಟ್ಟುಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದಾವಣಗೆರೆಗೆ ಆಗಮಿಸಿ ಕೇಕ್ ಕತ್ತರಿಸಿ, 100 ವರ್ಷ ಬಾಳಿ ಎಂದು ಶುಭ ಕೋರಿದ್ದರು.
ಶಾಮನೂರು ಶಿವಶಂಕರಪ್ಪ ಅವರು ಶಾಮನೂರು ಕಲ್ಲಪ್ಪ ಹಾಗೂ ಶಾಮನೂರು ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಜೂನ್ 16, 1931ರಲ್ಲಿ ದಾವಣಗೆರೆಯ ಶಾಮನೂರು ಗ್ರಾಮದಲ್ಲಿ ಜನಿಸಿದರು. ಪಾರ್ವತಮ್ಮ ಅವರನ್ನು ವಿವಾಹವಾದರು. ಇವರಿಗೆ ಡಾ.ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ.ಶೈಲಜಾ ಭಟ್ಟಾಚಾರ್ಯ, ಮೀನಾ ಡಾ.ಶರಣಪ್ಪ ಪಾಟೀಲ್ ಎಂಬ ನಾಲ್ವರು ಪುತ್ರಿಯರು ಮತ್ತು ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಮೂವರು ಪುತ್ರರಿದ್ದಾರೆ.
ಅಕ್ಕಿ ವ್ಯಾಪಾರ ಮಾಡುತ್ತಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಅವರು, ಮೊಟ್ಟ ಮೊದಲ ಬಾರಿಗೆ ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ನಗರಸಭೆ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕಾಂಗ್ರೆಸ್​ನಲ್ಲಿ ಹಲವು ದಶಕಗಳ ಕಾಲ ರಾಜಕಾರಣ ಮಾಡಿರುವ ಶಾಮನೂರು, ಜಿಲ್ಲೆಯಷ್ಟೇ ಅಲ್ಲದೇ ರಾಜ್ಯ, ದೇಶದಲ್ಲೇ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದು ಅವರ ವರ್ಚಸ್ಸಿಗೆ ಸಾಕ್ಷಿಯಾಗಿದೆ.
ಜಿಲ್ಲೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು. ಮೆಡಿಕಲ್ ಕಾಲೇಜುಗಳು, ಶಾಲೆ ಪಿಯು ಕಾಲೇಜು, ಕಾನೂನು ಕಾಲೇಜು, ವಸತಿಯುತ ಶಾಲೆಗಳು, ಡೆಂಟಲ್ ಕಾಲೇಜುಗಳನ್ನು ತೆರೆದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ.
ಆರು ಬಾರಿ ಶಾಸಕರಾಗಿ ಆಯ್ಕೆ: ಈ ಹಿಂದೆ ದಾವಣಗೆರೆ ಕ್ಷೇತ್ರದಲ್ಲಿ ವೀರಶೈವ ಪಂಚಮಸಾಲಿ ಸಮಾಜ ಹಾಗೂ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸಂಬಂಧಿಯೂ ಆಗಿದ್ದ ಯಜಮಾನ್ ಮೋತಿ ವೀರಣ್ಣ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ ಈ ಕ್ಷೇತ್ರ ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಾಗಿದ್ದು ಚರಿತ್ರೆ.
ಶಾಮನೂರು ಶಿವಶಂಕರಪ್ಪರವರು ತಮ್ಮ ಚಿಕ್ಕಪ್ಪ ಶಾಮನೂರು ಶಿವಪ್ಪರ ಪ್ರೇರಣೆಯಿಂದ ರಾಜಕೀಯ ಪ್ರವೇಶಿಸಿದರು. ಕಾಂಗ್ರೆಸ್​​ನ ಪ್ರಭಾವಿ ಮುಖಂಡ ಕೆ.ಎಚ್.ರಂಗನಾಥ್ ಶಿವಶಂಕರಪ್ಪರಿಗೆ ರಾಜಕೀಯದ ಮಾರ್ಗದರ್ಶಕರಾಗಿದ್ದರು.
1969ರಲ್ಲಿ ದಾವಣಗೆರೆ ಮುನ್ಸಿಪಲ್ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ ಅವರು,. 1971ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್​ನ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಇಂದಿರಾ ಗಾಂಧಿ ಕಾಂಗ್ರೆಸ್​ನ ಅಭ್ಯರ್ಥಿ ಟಿ.ವಿ.ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು. 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ. ಶಂಕರನಾರಾಯಣ ಅವರನ್ನು ಮಣಿಸಿದ ಶಾಮನೂರು ಶಿವಶಂಕರಪ್ಪ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1997ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ.ಮಲ್ಲಿಕಾರ್ಜುನಪ್ಪರನ್ನು ಸೋಲಿಸಿ ಸಂಸದರಾದರು.
2004ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆ, 2008ರಲ್ಲಿ ಮೂರನೇ ಬಾರಿ, 2013ರಲ್ಲಿ ನಾಲ್ಕನೇ ಬಾರಿ, 2018ರಲ್ಲಿ ಐದನೇ ಬಾರಿ ಹಾಗೂ 2023ರಲ್ಲಿ ಆರನೇ ಬಾರಿ ಶಾಸಕರಾಗಿ ಚುನಾಯಿತರಾದರು. 2013ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷಗಳ ಕಾಲ ತೋಟಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಅಚ್ಚರಿಯಂತೆ 1997ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಮತ್ತೆ ಲೋಕಸಭಾ ಚುನಾನಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
2008ರಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿ ವಿಂಗಡಿಸಲಾಯಿತು. 2008ರಿಂದ ಸತತ ಮೂರು ಬಾರಿ ಇಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ಗೆಲುವು ಸಾಧಿಸಿದ್ದಾರೆ. ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಇಲ್ಲಿ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಈವರೆಗೂ ಸಾಧ್ಯವಾಗಿಲ್ಲ. ಇದರಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಕೂಡ ಪಂಚಮಸಾಲಿ ಸಮಾಜದವರಾದ ಬಿ.ಜಿ.ಅಜಯ್ ಕುಮಾರ್ ಅವರನ್ನು ಕಣಕ್ಕಿಳಿಸಿ ಲಿಂಗಾಯತ ಅಸ್ತ್ರ ಪ್ರಯೋಗ ಮಾಡಿತ್ತು. ಆದರೆ, ಬಿಜೆಪಿ ಹಲವು ತಂತ್ರಗಳ ಹೊರತಾಗಿಯೂ ಕ್ಷೇತ್ರದಲ್ಲಿ ಮತ್ತೆ ಸೋಲು ಅನುಭವಿಸಬೇಕಾಯಿತು.
ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ: ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನೇತೃತ್ವದಲ್ಲಿ ಸಾಕಷ್ಟು ಕಾರ್ಯಕ್ರಮಗಳಾಗಿವೆ. ಅಲ್ಲದೆ, ಪಂಚಪೀಠಗಳನ್ನು ಒಂದೆಡೆ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜೊತೆಗೆ, ರೇಣುಕಾ ಮಂದಿರದಲ್ಲಿ ಶೃಂಗ ಸಮ್ಮೇಳನ ಮಾಡುವ ಮೂಲಕ ಎಲ್ಲಾ ಲಿಂಗಾಯತರು ಒಂದು ಕಡೆ ಸೇರಿ ಒಗ್ಗಟ್ಟು ಪ್ರದರ್ಶಿಸುವಂತೆ ಮಾಡಿದರು. ಪಂಚಪೀಠದ ಐವರು ಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ,‌ನಾವು ಎಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ಸಾರಿದ್ದರು.

Leave a Comment

error: Content is protected !!