ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಆರಂಭ. . . ಹೇಗಿದೆ ರಾಜಬೀದಿ ಉತ್ಸವ. . .

ಸುದ್ದಿ360 ಶಿವಮೊಗ್ಗ, ಸೆ. 28: ನಗರದ ಕೋಟೆ ಭೀಮೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ, ಹಿಂದೂ ಮಹಾಮಂಡಲದವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆಯ ನಂತರ  ರಾಜಬೀದಿ ಉತ್ಸವ ಪ್ರಾರಂಭಗೊಂಡಿದೆ.

ಶೃಂಗಾರಗೊಂಡ ರಸ್ತೆಗಳಲ್ಲಿ ಕಲಾತಂಡಗಳು

ಡೊಳ್ಳು, ತಮಟೆ, ವೀರಗಾಸೆ, ಮಹಿಳಾ ಡೊಳ್ಳು ತಂಡ, ನಾದಸ್ವರ, ಗೊಂಬೆ ವೇಷದಾರಿಗಳು ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಸಾಗಿರುವ  ಮೆರವಣಿಗೆಯಲ್ಲಿ ಸಾವಿರಾರು ಭಕ್ತಸಮೂಹ ಹೆಜ್ಜೆ ಹಾಕಿದೆ. ವಿವಿಧ ರಾಜಕೀಯ ಪಕ್ಷ, ಸಂಘಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದಾರೆ. ದೇಶಭಕ್ತಿಯ ಘೋಷಣೆಗಳು ಮುಗಿಲುಮುಟ್ಟಿವೆ. ಮೆರವಣಿಗೆ ಸಾಗುವ ಮಾರ್ಗ ತಳಿರು ತೋರಣ, ರಂಗೋಲಿ ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊಂಡಿವೆ.  

ಗಾಂಧಿಬಜಾರ್‍ ದ್ವಾರದಲ್ಲಿಇರಿಸಲಾಗಿರುವ 30 ಅಡಿ ಎತ್ತರದ  ಉಗ್ರನರಸಿಂಹನ ಮೂರ್ತಿ, ಶಿವಪ್ಪನಾಯಕ ವೃತ್ತದಲ್ಲಿನ ಶ್ರೀರಾಮನ ಪ್ರತಿಕೃತಿ, ಅಮೀರ್‍ ಅಹಮದ್‍ ವೃತ್ತದಲ್ಲಿ ಚಂದ್ರಯಾನ-3ರ ಪ್ರತಿಕೃತಿಗಳು ಈ ಬಾರಿಯ ಆಕರ್ಷಕ ಬಿಂದುಗಳಾಗಿವೆ.

ದಣಿವಿಗೆ ಆಹಾರ – ಗಣಪನಿಗೆ ವಿಶೇಷ ಹಾರ

ಮೆರವಣಿಗೆಯ ಸಂಭ್ರಮದಲ್ಲಿ ಮಿಂದೆದ್ದ ಭಕ್ತಸಮೂಹಕ್ಕೆ ಬಯಾರಿಕೆ ಮತ್ತು ಹಸಿವು ನೀಗಿಸಿಕೊಳ್ಳಲು ಹಲವೆಡೆ ಪಾನಕ- ಕೋಸಂಬರಿ, ಚಿತ್ರಾನ್ನ ವಿತರಣೆಯನ್ನು ಹಲವು ಸಂಘ ಸಂಸ್ಥೆಗಳು ಆಯೋಜಸಿದ್ದು, ಗಣೇಶನಿಗೆ ದೊಡ್ಡ ದೊಡ್ಡ ಗಾತ್ರದ ವಿಶೇಷವಾಗಿ ಅಲಂಕೃತಗೊಂಡ ಹೂವಿನ ಹಾರಗಳೊಂದಿಗೆ ಭಕ್ತಿ ಸಮರ್ಪಣೆ ನಡೆಯುತ್ತಿದೆ.

ಪೊಲೀಸ್‍ ಪಹರೆ:

ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆಗೆ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. 5 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 14 ಪೊಲೀಸ್  ಉಪಾಧೀಕ್ಷಕರು, 40 ಪೋಲಿಸ್ ನಿರೀಕ್ಷಕರು, 75 ಪೊಲೀಸ್ ಉಪ ನಿರೀಕ್ಷಕರು, 2,500 ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು, 10 ಡಿಎಆರ್ ತುಕಡಿ, 15 ಕೆಎಸ್ಆರ್.ಪಿ ತುಕಡಿ, 02 ಆರ್.ಎ.ಎಫ್ ಪಡೆ, 100 ವಿಡಿಯೋ ಕ್ಯಾಮರಾಗಳು ಮತ್ತು 8 ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಲಾಗಿದೆ.

ಮೆರವಣಿಗೆ ಸಾಗುವ ಮಾರ್ಗ :  

ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧೀ ಬಜಾರ್ ಮುಖ್ಯ ರಸ್ತೆ, ಎಸ್.ಎನ್.  ಸರ್ಕಲ್, ಬಿ.ಹೆಚ್ ರಸ್ತೆ ಮುಖಾಂತರ ಎ.ಎ ಸರ್ಕಲ್, ನೆಹರು ರಸ್ತೆ ಮುಖಾಂತರವಾಗಿ ಗೋಪಿ  ಸರ್ಕಲ್, ದುರ್ಗಿಗುಡಿ ಮುಖ್ಯ ರಸ್ತೆಯಿಂದ ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ ಶಿವಮೂರ್ತಿ ಸರ್ಕಲ್, ಸವಳಂಗ ಮುಖ್ಯ ರಸ್ತೆ ಮಾರ್ಗವಾಗಿ  ಮಹಾವೀರ್ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಬಿ.ಹೆಚ್ ರಸ್ತೆ, ಪೊಲೀಸ್  ಕಾರ್ನರ್, ಕೋಟೆ ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಬಳಿಯ ತುಂಗಾ  ನದಿಯಲ್ಲಿ ವಿಸರ್ಜನೆ ಮಾಡಲಾಗತ್ತದೆ.

ಮೆರವಣಿಗೆಯಲ್ಲಿ ಶಾಸಕ  ಎಸ್‍ ಎನ್‍ ಚನ್ನಬಸಪ್ಪ, ಪಾಲಿಕೆ ಮೇಯರ್ ಶಿವಕುಮಾರ್‍, ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಮಿಥುನ್ ಕುಮಾರ್‍,  ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!