ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ವೊಕ್ಕೇಜ್ನಲ್ ಟ್ರೈನಿಂಗ್ ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ವತಿಯಿಂದ 2024 – 25ನೇ ಸಾಲಿನ ಶೈಕ್ಷಣಿಕ ವರ್ಷದ ಬಿ. ವೋಖ್ ಡಿಗ್ರಿ ಪ್ರೋಗ್ರಾಮ್ಸ್ ಅಂಡ್ ವೊಕ್ಕೇಜ್ನಲ್ ಟ್ರೈನಿಂಗ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಉದ್ಘಾಟನೆಗೊಂಡಿತು. ಅಲ್ಲದೇ ಜಿಎಂ ವಿಶ್ವವಿದ್ಯಾಲಯದ ಜ್ಞಾನ ಸರಣಿ (GM university knowledge series) ಎಂಬ ಶೀರ್ಷಿಕೆಯಡಿ ಜನೋಪಯುಕ್ತವಾಗುವ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 9 ಪುಸ್ತಕಗಳನ್ನು ಫೆಬ್ರವರಿ 3ರ ಸೋಮವಾರ ಜಿ.ಎಂ. ವಿಶ್ವವಿದ್ಯಾಲಯದ ಎ.ವಿ. ಕೊಠಡಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರು, ವಿಶ್ವವಿದ್ಯಾಲಯಗಳು ಪದವೀಧರ ಉತ್ಪಾದಿಸುವುದರ ಜೊತೆಗೆ ಸ್ಥಳೀಯ ಬೇಡಿಕೆಗಳ ಆಧಾರದಲ್ಲಿ ಯೋಗ್ಯ ಮಾನವ ಸಂಪನ್ಮೂಲ ಸೃಜೀಸುವ ಶಕ್ತಿ ಕೇಂದ್ರಗಳಾಗಬೇಕು ಎಂದು ಅಭಿಪ್ರಾಯ ಪಟ್ಟರು.
ತಮ್ಮ ಮಾತನ್ನು ಮುಂದುವರಿಸುತ್ತಾ, ನಾವು ಸಹ ಜಿಎಂ ವಿಶ್ವವಿದ್ಯಾಲಯವನ್ನು ಈ ಆಧಾರದಲ್ಲಿ ಕಟ್ಟುತ್ತಿದ್ದೇನೆ. ದಾವಣಗೆರೆ ಜಿಲ್ಲೆಯ ಸಮಗ್ರ ಬೇಡಿಕೆಗೆ ಅನುಸಾರವಾಗಿ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ. ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 900 ಹಳ್ಳಿಗಳು, 117 ಗ್ರಾಮ ಪಂಚಾಯತಿಗಳು ಇದ್ದು, ಈ ಎಲ್ಲಾ ಕಡೆ ತಾಂತ್ರಿಕತೆ ವಿಚಾರದಲ್ಲಿ ಸ್ಥಳೀಯ ಬೇಡಿಕೆಗಳ ಪೂರೈಸುವ ಕೆಲಸ ಮಾಡಬೇಕಾಗಿದೆ ಎಂದು ಆಶಿಸಿದರು.
ಹೊಸ ಹೊಸ ಯಂತ್ರೋಪಕರಣಗಳು ಮಾರುಕಟ್ಟೆಗೆ ಬರುತ್ತಿದ್ದು, ಅವುಗಳನ್ನು ಸರಿಯಾಗಿ ಹೇಗೆ ಬಳಕೆ ಮಾಡಬೇಕೆಂಬ ಜ್ಞಾನವುಳ್ಳ ತಂತ್ರಜ್ಞರ ಕೊರತೆ ಇದೆ. ವೈದ್ಯಕೀಯ ಉಪಕರಣಗಳ ಖರೀದಿ ಮಾಡಲಾಗುತ್ತದೆ ಆದರೆ ಅವುಗಳ ಬಳಕೆಗೆ ಮಾನವ ಸಂಪನ್ಮೂಲವನ್ನು ಬೇರೆ ಕಡೆಯಿಂದ ಕರೆಸುವಂತಹ ಪರಿಸ್ಥಿತಿ ಇದೆ. ಈ ರೀತಿಯ ವಿಚಾರಗಳಲ್ಲಿನ ಕೊರತೆ ಬಗ್ಗೆ ಪರಿಹಾರ ಕಂಡುಕೊಳ್ಳುವುದನ್ನು ಪಠ್ಯದಲ್ಲಿ ಅನುಸರಣೆ ಮತ್ತು ಅಳವಡಿಕೆ ಅಸಾಧ್ಯ. ಆದರೆ, ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಶಿಬಿರಗಳ ಮುಖೇನ ಅನುಭವಿಗಳನ್ನು ತಯಾರು ಮಾಡಿದರೆ ಸ್ಥಳೀಯವಾಗಿ ತಂತ್ರಜ್ಞರು ಸಿಗಲಿದ್ದು, ಸ್ಥಳೀಯವಾಗಿ ಉದ್ಯೋಗಕಾಶವು ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ಗುರಿ ಒಂದು ಕಡೆಯಾದರೆ ವಿದ್ಯಾಭ್ಯಾಸ ಮಾಡುವುದೇ ಉದ್ಯೋಗಕ್ಕಾಗಿ ಎಂಬ ಈ ಎರಡು ರೀತಿಯಾಗಿ ವಿದ್ಯಾಭ್ಯಾಸಕ್ಕೆ ಬರುವಂತಹ ವಿದ್ಯಾರ್ಥಿಗಳನ್ನು ಕಾಣಬಹುದು. ಹಾಗಾಗಿ ವಿಶ್ವವಿದ್ಯಾಲಯಗಳು ಉದ್ಯೋಗ ಬಯಸಿ ವಿದ್ಯಾಭ್ಯಾಸಕ್ಕೆ ಬರುವಂತಹ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕೆಲಸ ಮಾಡುವಂತಹ ಶಕ್ತಿ, ಸಾಮರ್ಥ್ಯ, ಜ್ಞಾನವನ್ನು ನೀಡಿ ಸಮರ್ಥರನ್ನಾಗಿಸಬೇಕು. ಆಗ ಪದವೀಧರರಾಗಿ ಅಷ್ಟೇ ಅಲ್ಲದೆ ಉದ್ಯೋಗಕಾಶ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಕಾಣಬಹುದು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ್ ಮಲ್ಲಾಡ್ ಮಾತನಾಡಿ, ಜಿಎಂ ವಿಶ್ವವಿದ್ಯಾಲಯವು ಎಲೆಕ್ಟ್ರಿಕಲ್ ವೆಹಿಕಲ್ ಸಂಬಂಧಪಟ್ಟಂತೆ ಪದವಿ ಕೋರ್ಸ್ ಪ್ರಾರಂಭಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಈ ಪದವಿ ಪ್ರಾರಂಭಿಸಿದ ಮೊದಲ ವಿಶ್ವವಿದ್ಯಾಲಯವಾಗಿದೆ. ಈ ರೀತಿಯಾದಂತ ಕೌಶಲ್ಯ ಅಭಿವೃದ್ಧಿ ಪದವಿ ಪ್ರಾರಂಭಿಸಿದ್ದಕ್ಕೆ ಕರ್ನಾಟಕ ಸರ್ಕಾರ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಪರವಾಗಿ ಅಭಿನಂದಿಸಿದರಲ್ಲದೇ, ನಮ್ಮ ಇಲಾಖೆ ವತಿಯಿಂದ ಹೊಸ ಆವಿಷ್ಕಾರದ ಈ ವಿಶ್ವವಿದ್ಯಾಲಯವನ್ನು ಟ್ರೈನಿಂಗ್ ಪಾರ್ಟನರ್ ಆಗಿ ತೆಗೆದುಕೊಳ್ಳಲಾಗುವುದು. ಆಗ ಈ ವಿವಿಯು ಟ್ರೈನಿಂಗ್ ಸೆಂಟರ್ ನಡೆಸಲು ಅವಕಾಶ ನೀಡಬಹುದು, ಇಲ್ಲವೇ ವಿವಿಯಿಂದಲೇ ಟ್ರೈನಿಂಗ್ ಸೆಂಟರ್ ನಡೆಸಬಹುದು ಹಾಗೂ ಸಣ್ಣ ಕಾಲೇಜುಗಳಿಗೆ ಟ್ರೈನಿಂಗ್ ಪಾರ್ಟ್ನರ್ ಕೂಡ ಆಗಬಹುದು, ನಮ್ಮ ಇಲಾಖೆಯಿಂದಲೂ ಗೊತ್ತಿರುವ ಟ್ರೈನಿಂಗ್ ಸೆಂಟರ್ ಅನ್ನು ವಿವಿಗೆ ಕೊಡಬಹುದು ಎಂದರು.
ಗೌರವ ಅತಿಥಿಗಳಾಗಿ ಟಾಟಾ ಮೋಟರ್ಸ್ ನ ಜನರಲ್ ಮ್ಯಾನೇಜರ್ ಸಿ.ಎ. ಕಿರಣ್ ಕುಮಾರ್, ಸಹಕುಲಪತಿಗಳಾದ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್. ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಎಂಯು ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಇಂದು ಉದ್ಘಾಟನೆಗೊಂಡಿರುವ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವು ಬಿಕಾಂ ಮತ್ತು ಬಿಇ ವಿದ್ಯಾಭ್ಯಾಸದಷ್ಟೇ ಸಮನಾಗಿ ಮುಂದೆ ಸಾಗಬೇಕು. ಈ ತರಬೇತಿ ಕಾರ್ಯಕ್ರಮಗಳಿಗೆ ಎಸ್ ಎಸ್ ಎಲ್ ಸಿ, ಪಿಯುಸಿ ಸೇರಿದಂತೆ ಯಾವುದೇ ವಿದ್ಯಾರ್ಹತೆ ಬೇಕಿಲ್ಲ. ಆಸಕ್ತಿಯುಳ್ಳಂತವರಿಗೆ ತರಬೇತಿ ನೀಡಿ ಅನುಭವಗಳನ್ನಾಗಿಸುವ ಕೇಂದ್ರವಾಗಬೇಕು. ಕೌಶಲ್ಯಗಳ ಜ್ಞಾನವನ್ನು ನೀವು ಪಡೆದು ಅನುಭವ ಇಲ್ಲದವರಿಗೆ ಕೌಶಲ್ಯಗಳ ಜ್ಞಾನವನ್ನು ತರಬೇತಿ ಮೂಲಕ ಧಾರೆ ಎರೆದು ಅನುಭವಿಗಳನ್ನು ತಯಾರು ಮಾಡಬೇಕು. ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಭಾವನೆ ಮುಂದಿಟ್ಟುಕೊಂಡು ಮನಸ್ಸು ಮಾಡಿ ಜನೋಪಯುಕ್ತವಾದಂತ ಪುಸ್ತಕಗಳನ್ನ ನೀವು ಸಹ ಬರೆಯಬೇಕು. ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಜನಸಾಮಾನ್ಯರಿಗೆ ಧಾರೆಯೆರೆಯುವುದರಿಂದ ಅವರ ಬಾಳು ಹಸನಾಗಲಿದೆ. ಅಲ್ಲದೇ ಬದುಕು ಕಟ್ಟಿಕೊಂಡು ಮನೆತನ ಬೆಳಗಿಸಲು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ನೀವೆಲ್ಲಾ ಸಂಕಲ್ಪ ಮಾಡಬೇಕು ಎಂದು ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕ ವೃಂದಕ್ಕೆ ಕಿವಿಮಾತು ಹೇಳಿದರು.
ಬಿ. ವೋಖ್ ಡಿಗ್ರಿ ಪ್ರೋಗ್ರಾಮ್ಸ್ ಅಂಡ್ ವೊಕ್ಕೇಜ್ನಲ್ ಟ್ರೈನಿಂಗ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಕೋಆರ್ಡಿನೇಟರ್ ಮತ್ತು ಜಿಎಂಯು ಎಸ್ ವಿಟಿ ನಿರ್ದೇಶಕರಾದ ಡಾ. ಬಿ.ಆರ್. ಶ್ರೀಧರ್ ಸ್ವಾಗತಿಸುತ್ತಾ, ಪ್ರಯಾಗ್ ರಾಜ್ ದಲ್ಲಿ ತ್ರಿವೇಣಿ ಸಂಗಮದಲ್ಲಿ ಜನರು ಪವಿತ್ರ ಸ್ನಾನದಲ್ಲಿ ಮಿಂದೇಳುತ್ತಿದ್ದಾರೆ. ಅಂತೆ ನಮ್ಮ ಜಿಎಂ ವಿಶ್ವವಿದ್ಯಾಲಯದಲ್ಲಿ ಪ್ರಯೋಗ ರಾಜ್ ನಡೆಯುತ್ತಿದ್ದು, ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಶಿಬಿರ ಉದ್ಘಾಟನೆ ಹಾಗೂ 9 ಜನಪಯುಕ್ತ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ತ್ರಿವೇಣಿ ಸಂಗಮದಂತಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಇದೇ ವೇಳೆ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರ ನಾಲ್ಕು ಪುಸ್ತಕಗಳು, ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಅಂಡ್ ರಿಸರ್ಚ್ ವಿಭಾಗದ 4 ಪುಸ್ತಕಗಳು, ಡಾ. ಉಮಾ ಮುರಳೀಧರ್ ಅವರ ಒಂದು ಪುಸ್ತಕವನ್ನು ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಸೇರಿದಂತೆ ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಗಳು, ನಿರ್ದೇಶಕರು, ಅಧ್ಯಾಪಕ ವೃಂದ ಭಾಗವಹಿಸಿದ್ದರು.

By admin

Leave a Reply

Your email address will not be published. Required fields are marked *

error: Content is protected !!