ಸ್ಪರ್ಧೆಗೆ ಉತ್ಸುಕರಾಗಿ ಬಂದ ಮಕ್ಕಳು ಸ್ಪರ್ಧೆಯಿಂದ ಹೊರಗುಳಿದಿದ್ದಾದರೂ ಏಕೆ…?

ಪೋಷಕರೊಂದಿಗೆ ಅಧಿಕಾರಿ ವರ್ಗ ನಡೆದುಕೊಂಡ ರೀತಿ ಎಷ್ಟು ಸರಿ. . .?

ಸುದ್ದಿ360 ಶಿವಮೊಗ್ಗ ಸೆ.25: ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಮ್ಮ ಮಕ್ಕಳ ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದ ಪೋಷಕರು ಮುಜುಗರಕ್ಕೀಡಾಗುವ ಮತ್ತು ಹಲವು ಮಕ್ಕಳು ಸ್ಪರ್ಧೆಯಿಂದಲೇ ದೂರ ಉಳಿಯಬೇಕಾದ ಪ್ರಸಂಗಕ್ಕೆ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ ಸಾಕ್ಷಿಯಾಗಿದೆ.

ಶನಿವಾರ ಶಿವಮೊಗ್ಗ ನಗರದ ದುರ್ಗಿಗುಡಿ ಶಾಲೆಯಲ್ಲಿ ಆಯೋಜನೆಗೊಂಡಿದ್ದ 14/17 ವಯೋಮಿತಿಯ ಶಾಲಾ ಬಾಲಕ ಬಾಲಕಿಯ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಇಂತಹ ವಾತಾವರಣ ನಿರ್ಮಾಣವಾದದ್ದು ಮಕ್ಕಳ ಪೋಷಕರ ಮತ್ತು ತರಬೇತುದಾರರ ನಿರಾಸೆಗೆ ಕಾರಣವಾಗಿದೆ.

ತಮ್ಮ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ವೀಕ್ಷಿಸಲು ಬಂದಿದ್ದ ಪೋಷಕರನ್ನು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಿರಂಜನ್ ಮೂರ್ತಿ ಮತ್ತು ಅವರೊಂದಿಗಿದ್ದ ಕೆಲವರು ಏರುದನಿಯಲ್ಲಿ ಗದರಿಸಿ ಹೊರಗೆ ತಳ್ಳಿದ ಘಟನೆಯಿಂದ ಪೋಷಕರು ಮುಜುಗರಕ್ಕೆ ಈಡಾಗಿದ್ದಾರೆ.  ಇಲ್ಲಿ ಸ್ಪರ್ಧೆಯನ್ನು ಆಯೋಜಿಸಿದ  ಶಾಲೆಯವರು ಶ್ರಮವಹಿಸಿ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾಗ್ಯೂ ಕೂಡ ಅಧಿಕಾರಿ ವರ್ಗದ  ಎಡವಟ್ಟಿನ ನಡತೆಯಿಂದಾಗಿ ಪೋಷಕರು ಮುಜುಗರಕ್ಕೆ ಒಳಗಾದರೆ, ಮತ್ತೆ ಕೆಲವು ಮಕ್ಕಳು ಸ್ಪರ್ಧೆಯಿಂದಲೇ ದೂರ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದರಿಂದ ದೂರದೂರಿನಿಂದ ಬಂದ ಬಹುತೇಕ ಮಕ್ಕಳು ನಿರಾಸೆಗೊಂಡು ಮನೆಗೆ ತೆರಳಿದ್ದಾರೆ.

ಮಕ್ಕಳ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸುವ ಪೋಷಕರು ಹಾಗೂ ಶಿಕ್ಷಕರು, ತಮ್ಮ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮತ್ತು ಅವರನ್ನು ಹುರಿದುಂಬಿಸುವ ಕೆಲಸದಲ್ಲಿ ತೊಡಗುವುದು ಸಾಮಾನ್ಯ. ಇದನ್ನು ಅಧಿಕಾರಿಗಳೂ ಸಹ ಅರಿತು ಪೋಷಕರ ಪಾಲ್ಗೊಳ್ಳುವಿಕೆಗೆ ಅನುವು ಮಾಡಿಕೊಡುವ ವ್ಯವಸ್ಥೆಯಾಗಬೇಕು.

-ನೊಂದ ಪೋಷಕ

ಸ್ಪರ್ಧಿಗಳ ಪಾಲ್ಗೊಳ್ಳುವಿಕೆ ಮತ್ತು ಅವರು ಶಾಲೆಯಿಂದ ತಂದ ಅರ್ಜಿಗಳನ್ನು ಬೆಳಗಿನಿಂದಲೇ ಪರಿಶೀಲಿಸಿ ಸ್ಪರ್ಧೆಗೆ ಹಾಜರಿರುವಂತೆ ತಿಳಿಸಿದ ಸ್ಪರ್ಧಾಳುಗಳಿಗೆ ಸ್ಪರ್ಧೆಯ ಸಮಯದಲ್ಲಿ ಸ್ಪರ್ಧೆಯಿಂದ ದೂರವಿಡಲಾಗಿದೆ.

ಸ್ಪರ್ಧೆಯಲ್ಲಿ ತಮ್ಮಪಾಲ್ಗೊಳ್ಳುವಿಕೆಯನ್ನು ಖಚಿತ ಪಡಿಸಿಕೊಂಡು ತಮ್ಮ ಸರದಿಗಾಗಿ ಕಾದು ಕುಳಿತು ಸ್ಪರ್ಧೆಯ ಅಂಕಣಕ್ಕೆ ಹಾಜರಾಗುವ ವೇಳೆ ಮಕ್ಕಳಿಗೆ ಶಾಲೆಯಿಂದ ನೀಡಬೇಕಾದ ಅರ್ಜಿಯಲ್ಲಿ ಸಹಿ ಇಲ್ಲ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹೊರಗಿಡಲಾಗಿದೆ. ಮತ್ತೆ ಕೆಲವರಿಗೆ ನಿಮ್ಮ ವಿಭಾಗ ಬೇರೆ ಎಂದು ಹೇಳಿ ಅವರನ್ನು ಇನ್ನೊಂದು ವಿಭಾಗಕ್ಕೆ ಹೋಗಲು ಹೇಳಲಾಗಿದೆ. ಅವರು ಆ ವಿಭಾಗದ ಅಂಕಣಕ್ಕೆ ಹೋದರೆ ಅಲ್ಲಿ ಸ್ಪರ್ಧೆಯೇ ಮುಗಿದು ಹೋಗಿರುವ ಘಟನೆಗಳು ನಡೆದಿವೆ. ಇದಕ್ಕೆಲ್ಲಾ ಶಿಕ್ಷಣ  ಇಲಾಖೆ ಮೊದಲೆ ಸುತ್ತೋಲೆ ಹೊರಡಿಸಿ ಸ್ಪರ್ಧಿಯ ಅರ್ಹತಾ ನಮೂನೆ ಯಾವ ರೀತಿ ಇರಬೇಕು ಎಂಬುದರ ಮಾಹಿತಿ ನೀಡಿರಲಿಲ್ಲವೇ?  ಮತ್ತು ವಿದ್ಯಾರ್ಥಿಯ ಸ್ಟ್ಯಾಟ್ಸ್ ನಂಬರಿನಿಂದ ವಿದ್ಯಾರ್ಥಿಯ ಮಾಹಿತಿಯನ್ನು ಖತಿಪಡಸಿಕೊಳ್ಳಲು ಅವಕಾಶವಿದ್ದರೂ ಕೂಡ ಇದನ್ನು ಮಾಡದೇ, ಮಕ್ಕಳನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡಲಾಗಿದೆ. ಬೆಳಗ್ಗೆಯೇ ಮಕ್ಕಳ ಸ್ಪರ್ಧೆಯನ್ನು ಖಾತ್ರಿ ಪಡಿಸಿದ ವೇಳೆ ಮುಖ್ಯಶಿಕ್ಷಕರ ಸಹಿಯ ಅವಶ್ಯಕತೆ ಇದೆ ಎಂದು ತಿಳಿಸಿದ್ದರೆ ನಾವು ಸ್ಪರ್ಧೆಯ ವೇಳೆಗೆ ಸಹಿ ಹಾಕಿಸಿಕೊಂಡು ಬರುತ್ತಿದ್ದೆವು ಎಂಬುದು ಕೆಲವು ಪೋಷಕರ ಅಳಲು ಕೂಡ. ದೂರದ  ಊರುಗಳಿಂದ ಸ್ಪರ್ಧೆಗೆ ತಯಾರಾಗಿ ಬಂದ ಮಕ್ಕಳಿಗೆ ನಿರಾಸೆಯುಂಟು ಮಾಡಿರುವುದು ಎಷ್ಟು ಸರಿ ಎಂಬುದು ಪೋಷಕರ ಪ್ರಶ್ನೆ.

ಇಂತಹ ಸ್ಪರ್ಧೆಗಳು ಆಯೋಜನೆಯಾಗುವುದೇ ವರ್ಷಕ್ಕೆ ಒಂದು ಬಾರಿ. ಇದಕ್ಕಾಗಿಯೇ ತರಬೇತಿ ಪಡೆದು, ಸಿದ್ಧವಾಗಿದ್ದ ಮಕ್ಕಳಿಗೆ ಇದರಿಂದ ಅನ್ಯಾಯವಾಗಿದೆ ಎಂಬುದು ಪೋಷಕರು ಮತ್ತು ತರಬೇತುದಾರರ ಅಳಲಾಗಿದೆ.

ಇಂತಹ ಅವಘಡಗಳು ಮರುಕಳಿಸಿದಂತೆ ದೈಹಿಕ ಶಿಕ್ಷಣ ಇಲಾಖೆ ಕ್ರಮವಹಿಸಲಿ ಎಂಬುದು ಸ್ಪರ್ಧೆಯಿಂದ ವಿಮುಖರಾದ ಸ್ಪರ್ಧಾಳುಗಳ, ಪೋಷಕರ ಮತ್ತು ತರಬೇತುದಾರರ ಆಗ್ರಹವಾಗಿದೆ.

admin

admin

Leave a Reply

Your email address will not be published. Required fields are marked *

error: Content is protected !!