‘ಘಂಟೆ ಹೊಡೆಯಲು ಸಿದ್ಧ’ – ದಿನೇಶ್‍ ಶೆಟ್ಟಿ ಸವಾಲು ಸ್ವೀಕರಿಸಿದ ಯಶವಂತರಾವ್‍ ಜಾಧವ್  

Yashwantrao Jadhav accepted the challenge

ದಿನಾಂಕ ನಿಗದಿ ಮಾಡಿ – ‘ಎಸ್‍ಎಸ್‍ಎಸ್‍ ಮತ್ತು ಎಸ್ಎಸ್ ಮಲ್ಲಿಕಾರ್ಜುನ್ ದುಗ್ಗಮ್ಮನ ಗುಡಿಗೆ ಬರಲಿ’

ಸುದ್ದಿ360 ದಾವಣಗೆರೆ:  ದಾಖಲೆಗಳಿಲ್ಲದೆ ನಾನು ಮಾತಾಡಲ್ಲ. ಹಗಲು ದರೋಡೆ ಮಾಡಿರುವವರೇ ಆರೋಪ ಮಾಡಿರುವುದು ಹಾಸ್ಯಾಸ್ಪದ. ಯಾವ ಸಮಯಕ್ಕೆ ಕರೆದರೂ ನಾವು ದುರ್ಗಮ್ಮನ ಗುಡಿಗೆ ಬಂದು  ಘಂಟೆ ಹೊಡೆಯಲು ನಾನು ಮತ್ತು ಸಿದ್ದೇಶ್ವರ ಸಿದ್ಧರಿದ್ದೇವೆ. ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್‍ ಎಸ್‍ ಮಲ್ಲಿಕಾರ್ಜುನ್‍ ಬರಲಿ. ದಿನೇಶ್‍ ಶೆಟ್ಟಿಯವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಸಿದ್ದೇಶ್ವರ-ಯಶವಂತರಾವ್ ತೆರಿಗೆ (ಎಸ್ವೈ ತೆರಿಗೆ) ಜಾರಿಯಲ್ಲಿತ್ತು ಎಂಬುದೂ ಸೇರಿ ದಿನೇಶ್ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡರು ಸಂಸದರು ಹಾಗೂ ನನ್ನ ಮೇಲೆ ಗುರುತರ ಭ್ರಷ್ಟಾಚಾರ ಆರೋಪ ಹೊರಿಸಿರುವುದನ್ನು ಅಲ್ಲಗಳೆದರಲ್ಲದೆ, ನಾವು ಲಂಚ ತೆಗೆದುಕೊಂಡಿಲ್ಲ ಎಂದು ದೇವಸ್ಥಾನದಲ್ಲಿ ನಾವೇ ಮೊದಲು ಘಂಟೆ ಹೊಡೆಯುತ್ತೇವೆ. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ದಿನೇಶ್ ಶೆಟ್ಟಿ ದೇವಸ್ಥಾನಕ್ಕೆ ಕರೆತರಲಿ ಎಂದರು.

ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ನಾನು ಶಾಮನೂರು ಕುಟುಂಬದ ಮೇಲೆ ಹಲವು ಆರೋಪ ಮಾಡಿ, ಸಾಕ್ಷಿ ಪ್ರಸ್ತುತ ಪಡಿಸುವುದಾಗಿ ತಿಳಿಸಿದ್ದೆ. ಅದರಂತೆ ಮಹಾನಗರ ಪಾಲಿಕೆ ಆವರಣದ ರಂಗಮಂದಿರದಲ್ಲಿ ಅರ್ಧ ದಿನ ಕಾದರೂ ಒಬ್ಬ ಕಾಂಗ್ರೆಸ್ ಮುಖಂಡರೂ ಸುಳಿಯಲಿಲ್ಲ. ಶಾಮನೂರು ಕುಟುಂಬದವರು ಭ್ರಷ್ಟಾಚಾರ ಮಾಡಿಲ್ಲದಿದ್ದರೆ ಅಂದು ಬಂದು ಆರೋಪ ನಿರಾಕರಿಸಬಹುದಿತ್ತು. ಇನ್ನು ದಿನೇಶ್ ಶೆಟ್ಟಿ, ಪಿಜೆ ಬಡಾವಣೆಯ ಫುಟ್ಪಾತ್ಗಳಲ್ಲಿ ಅಂಗಡಿ ಇಟ್ಟುಕೊಂಡವರ ಬಳಿ ಚಂದಾ ವಸೂಲಿ ಮಾಡಿರುವುದು ಎಲ್ಲರಿಗೂ ಗೊತ್ತು. ಅಂಗಡಿ ಮಾಲೀಕರು ಸಾಕ್ಷಿ ಹೇಳಲು ಸಿದ್ಧರಿದ್ದಾರೆ. ಚಂದಾ ವಸೂಲಿ ಮಾಡಿಲ್ಲ ಎಂದು ಘಂಟೆ ಹೊಡೆಯಲು ಶೆಟ್ಟಿ ಸಿದ್ಧರಿರುವರೇ,” ಎಂದು ಸವಾಲು ಹಾಕಿದರು.

ಮೆಡಿಕಲ್ ಕಾಲೇಜು ಮಂಜೂರಾಗದಿರಲು ವ್ಯವಸ್ಥಿತ ಸಂಚು

ದಾವಣಗೆರೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗದಂತೆ ವ್ಯವಸ್ಥಿತವಾಗಿ ಸಂಚು ಶಾಮನೂರು ಕುಟುಂಬದಿಂದ ನಡೆಯುತ್ತಿದೆ. ಟಿವಿ ಸ್ಟೇಷನ್ ಕೆರೆ ಪಕ್ಕದಲ್ಲಿ ಸುಮಾರು 2 ಲಕ್ಷ ಲೀಟರ್ ಸಾಮರ್ಥ್ಯದ ಸಂಪು ನಿರ್ಮಿಸಿ, ಅಲ್ಲಿಂದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ನೀರು ತೆಗೆದುಕೊಂಡು ಹೋಗಲಾಗಿದೆ. ಎಂದು ಯಶವಂತರಾವ್‍ ಜಾಧವ್‍ ಆರೋಪಿಸಿದರು.

ಶಾಮನೂರು ಕುಟುಂಬ ಒಡೆತನದ ರೈಸ್ಮಿಲ್ನಲ್ಲಿ ಕರೆಂಟ್ ಕದ್ದ ಕಾರಣಕ್ಕೆ ಕೇಸ್ ಹಾಕಿ, ದಂಡ ವಿಧಿಸಿದ್ದು ಯಾರಿಗೆ?  ಬಾಪೂಜಿ ಸಂಸ್ಥೆ ಕಟ್ಟಿದ್ದು ಯಾರು? ಸಂಸ್ಥೆ ಕಟ್ಟಿ ಬೆಳೆಸಿದವರ ಪಾಡು ಇಂದು ಏನಾಗಿದೆ? ಎಸ್.ಎಸ್. ಮಾಲ್ ಕಟ್ಟಲು ರಸ್ತೆ, ಪಾರ್ಕ್ ಹಾಗೂ ಮುತ್ಸದ್ದಿ ರಾಜಕಾರಣಿ ಗಾಂಜಿವೀರಪ್ಪನವರ ಸಮಾಧಿ ಸಮೇತ ಜಾಗ ಕಬಳಿಸಿಲ್ಲವೇ? ಮಾಲ್ ಒತ್ತುವರಿಗೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದ ಮಹಾದೇವ್ ನಿಗೂಢ ಸಾವಿಗೆ ಕಾರಣ ಯಾರು” ಎಂದು ಯಶವಂತರಾವ್ ಜಾಧವ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಕೊಂಡಜ್ಜಿ ಜಯಪ್ರಕಾಶ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ನಸೀರ್ ಅಹಮದ್, ಶಿವನಗೌಡ ಪಾಟೀಲ್, ರಮೇಶ್ ನಾಯ್ಕ, ಕಿಶೋರ್ ಕುಮಾರ್ ಮಡಿವಾಳ್  ಉಪಸ್ತಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!